Advertisement

ತಿಂಗಳ ಅವಧಿಯಲ್ಲಿ ರಿಷಿ ಮೇಲಿದ್ದ ಅಭಿಪ್ರಾಯ ಬದಲು; ರಿಷಿ ಕೈಹಿಡಿದ ತೆರಿಗೆ, ವಿತ್ತ ನೀತಿ

12:25 AM Oct 25, 2022 | Team Udayavani |

ಕೆಲವು ತಿಂಗಳುಗಳಿಂದ ಹೊಯ್ದಾಡುವ ದೋಣಿಯಂತಾಗಿರುವ ಬ್ರಿಟನ್‌ನ ಚುಕ್ಕಾಣಿ ಭಾರತೀಯ ಮೂಲದ ರಿಷಿ ಸುನಕ್‌ ಕೈಗಳಿಗೆ ಮತ್ತೆ ಒಲಿದು ಬಂದಿದೆ. ಈ ಹಿಂದೆ ಬೋರಿಸ್‌ ಜಾನ್ಸನ್‌ ನಿರ್ಗಮನದ ಬಳಿಕ ಪ್ರಧಾನಿ ಪಟ್ಟಕ್ಕೆ ಏರಬಲ್ಲ ವ್ಯಕ್ತಿಗಳಲ್ಲಿ ರಿಷಿ ಮುಂಚೂಣಿಯಲ್ಲಿದ್ದರು. ಆದರೆ ಆ ಬಳಿಕ ಅದು ಲಿಜ್‌ ಟ್ರಸ್‌ ಕೈಹಿಡಿಯಿತು. ಕೆಲವೇ ವಾರಗಳ ಬಳಿಕ ಲಿಜ್‌ ಕೆಳಗಿಳಿದಿದ್ದು, ಒಮ್ಮೆ ಹಿಂದಕ್ಕೆ ಸರಿದಿದ್ದ ರಿಷಿ ಸುನಕ್‌ ಹೆಸರು ಮತ್ತೆ ಮುನ್ನೆಲೆಗೆ ಬಂತು. ಇದಕ್ಕೆ ಪ್ರಧಾನವಾಗಿ ಕಾರಣ ಹಿಂದೆ ವಿತ್ತ ಸಚಿವರಾಗಿದ್ದ ಕಾಲದಲ್ಲಿ ಆರ್ಥಿಕ ವಿಚಾರವಾಗಿ ರಿಷಿ ಅವರ ಆಲೋಚನೆಗಳು.

Advertisement

ಪ್ರಸ್ತುತ ಬ್ರಿಟನ್‌ ರಾಜಕಾರಣದಲ್ಲಿರುವ ಬಹುತೇಕ ಭಾರತೀಯ ಮೂಲದವರು ರಿಷಿ ಅವರ ನೇತಾರಿಕೆಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ನಿಷ್ಠರಾಗಿರುವ ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್‌ ಅವರು ರಿಷಿ ಅವರನ್ನು ಬಲವಾಗಿ ಬೆಂಬಲಿಸಿದ್ದಾರೆ. ದೇಶದ ಹಿತಕ್ಕಾಗಿ ಟೋರಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ರಿಷಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳಬೇಕು ಎಂಬುದಾಗಿ ಪ್ರೀತಿ ಪಟೇಲ್‌ ಹೇಳಿದ್ದಾರೆ.

ಇತ್ತೀಚೆಗೆ ಲಿಜ್‌ ಟ್ರಸ್‌ ಸಂಪುಟ ದಿಂದ ಹೊರ ಬಿದ್ದಿದ್ದ ಗೃಹ ಸಚಿವೆ ಸುಯೆಲ್ಲಾ ಬ್ರೇವರ್‌ಮನ್‌ ಕೂಡ ರಿಷಿ ಅವ ರನ್ನು ಬೆಂಬಲಿಸಿದ್ದಾರೆ.

ಉತ್ತಮ ಭವಿಷ್ಯ ಕ್ಕಾಗಿ ನಮ್ಮ ದೇಶದ ಅಂತಶ್ಶಕ್ತಿಯನ್ನು ಉದ್ದೀಪನ ಗೊಳಿಸುವಂತಹ ನಾಯಕ ನಮಗೀಗ ಬೇಕು. ರಿಷಿ ಸುನಕ್‌ ಅಂಥ ನಾಯಕ ಎಂದು ಅವರು ಹೇಳಿದ್ದಾರೆ.

ಇನ್ನು, ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯಾಪಾರ ಕಾರ್ಯದರ್ಶಿಯಾಗಿರುವ ಕೆಮಿ ಬಡೆನೊಕ್‌ ಅವರು ರಿಷಿ ಸುನಕ್‌ ಅವರನ್ನು ಬೆಂಬಲಿಸಿ ಆಡಿರುವ ಮಾತುಗಳು ಗಮನಾರ್ಹವಾಗಿವೆ. ಬ್ರಿಟನ್‌ನ ಕುಸಿಯುತ್ತಿರುವ ಆರ್ಥಿಕತೆಯನ್ನು ಸ್ಥಿರಗೊಳಿಸಬಲ್ಲ ಸಾಮರ್ಥ್ಯ ರಿಷಿ ಅವರಿಗಿದೆ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದು, ಬೋರಿಸ್‌ ಜಾನ್ಸನ್‌ ಕಾಲದಲ್ಲಿ ವಿತ್ತ ಮಂತ್ರಿಯಾಗಿದ್ದಾಗ ರಿಷಿ ಸುನಕ್‌ ಅನುಸರಿಸಿದ್ದ ನೀತಿಗಳು ಆಗ ಸ್ವಪಕ್ಷೀಯರಿಂದ ವಿರೋಧಿಸಲ್ಪಟ್ಟಿದ್ದರೂ ಸರಿಯಾಗಿದ್ದವು ಎಂಬರ್ಥದಲ್ಲಿವೆ. ಇದು ಈಗ ರಿಷಿ ಅವರ ಉಮೇದುವಾರಿಕೆಗೆ ಹೆಚ್ಚು ಬಲವನ್ನು ತಂದುಕೊಟ್ಟಿದೆ. “ರಿಷಿ ಅವರು ವಿತ್ತಮಂತ್ರಿಯಾಗಿದ್ದಾಗ ನಾನು ಅವರ ಜತೆಗೆ ಕೆಲಸ ಮಾಡಿದ್ದೇನೆ. ಆಗ ಅವರ ನೀತಿಗಳನ್ನು ನಾನು ವಿರೋಧಿಸಿದ್ದೆ. ಆದರೆ ಅವು ಸರಿಯಾಗಿದ್ದವು ಎಂಬುದು ಈಗ ಅರಿವಾಗುತ್ತಿದೆ’ ಎಂಬುದಾಗಿ ಕೆಮಿ ಬಡೆನೊಕ್‌ ಬಹಿರಂಗವಾಗಿ ವ್ಯಕ್ತಪಡಿಸಿರುವ ಅಭಿಪ್ರಾಯ ರಿಷಿ ಸುನಕ್‌ ಅವರ ವಿತ್ತ ನೀತಿಗಳ ತೂಕವನ್ನು ಹೆಚ್ಚಿಸಿದೆ.

Advertisement

ಈ ಬಾರಿ ಕನ್ಸರ್ವೇಟಿವ್‌ ಪಕ್ಷವು ಅಭ್ಯರ್ಥಿಯ ಆಯ್ಕೆಗೆ ಕಾಲಾವಕಾಶವನ್ನು ಅತ್ಯಂತ ಕನಿಷ್ಠಗೊಳಿಸಿದೆ. ಈ ಹಿನ್ನೆಲೆಯಲ್ಲಿ ವಿರೋಧಾಭಾಸದ ಒಳಪ್ರಚಾರಗಳಿಂದ ಈ ಹಿಂದಿನಂತೆ ರಿಷಿ ಸುನಕ್‌ ಹಿನ್ನಡೆ ಅನುಭವಿಸುವ ಸಾಧ್ಯತೆಗಳಿಲ್ಲ. ಹಿಂದಿನ ಬಾರಿ ಮೊದಲಿಗೆ ಅವರು ಮುಂಚೂಣಿಯಲ್ಲಿದ್ದರೂ ಆ ಬಳಿಕ ಸ್ವಂತ ಆಸ್ತಿ, ವಿಲಾಸಿ ಜೀವನಶೈಲಿ, ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ವಿಚಾರ ಇತ್ಯಾದಿಗಳಿಂದ ಅವರ ಬಗ್ಗೆ ವಿರೋಧಾಭಿಪ್ರಾಯ ಮೂಡಿ ಹಿನ್ನಡೆ ಉಂಟಾಗಿತ್ತು. ಈ ಬಾರಿ ಅಂಥದ್ದಕ್ಕೆ ಅವಕಾಶ ಕಡಿಮೆ. ಅಲ್ಲದೆ ಜಾನ್ಸನ್‌ ನಿರ್ಗಮನ, ಅದರ ಬೆನ್ನಿಗೆ ಆಯ್ಕೆಯಾದ ಲಿಜ್‌ ಟ್ರಸ್‌ ಕೂಡ ನಿರ್ಗಮಿಸಿರುವುದರಿಂದ ರಿಷಿ ಸುನಕ್‌ ಅವರ ತೆರಿಗೆ, ಹಣಕಾಸು ನೀತಿಗಳು ಸರಿಯಾಗಿದ್ದವು ಎಂಬ ವ್ಯಾಪಕ ಅಭಿಪ್ರಾಯ ಮೂಡಿರುವುದು ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.
ಈ ಬಾರಿಯೂ ರಿಷಿ ಸುನಕ್‌ ಮುಖ್ಯವಾಗಿ ಕನ್ಸರ್ವೇಟಿಸ್‌ ಪಕ್ಷವನ್ನು ಒಗ್ಗೂಡಿಸುವುದು ಮತ್ತು ಬ್ರಿಟನ್‌ನ ಕುಸಿಯುತ್ತಿರುವ ಆರ್ಥಿಕತೆಯನ್ನು ಮರಳಿ ಹಳಿಗೆ ತರುವುದನ್ನೇ ತನ್ನ ಉಮೇದುವಾರಿಕೆಯ ಪ್ರಧಾನ ಅಂಶಗಳಾಗಿ ಪ್ರತಿಪಾದಿಸಿದ್ದಾರೆ. ಇದು ಅವರಿಗೆ ಮತ್ತಷ್ಟು ಬಲ ತಂದಿದೆ.

ದೇಶಕ್ಕೆ ಒದಗಿರುವ ಈ ಕಷ್ಟಕಾಲದಲ್ಲಿ ನಾವೆಲ್ಲ ದೇಶದ ಹಿತಕ್ಕಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಜತೆಗೂಡಿ ಕೆಲಸ ಮಾಡಬೇಕು. ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ, ನಾವು ನಮ್ಮ ರಾಜಕೀಯ ಭಿನ್ನಮತಗಳನ್ನು ಹಿಂದೆ ಸರಿಸಿ ರಿಷಿ ಸುನಕ್‌ಗೆ ಅವಕಾಶ ಮಾಡಿಕೊಡಬೇಕು.
-ಪ್ರೀತಿ ಪಟೇಲ್‌, ಕನ್ಸರ್ವೇಟಿವ್‌ ಸಂಸದೆ

 

Advertisement

Udayavani is now on Telegram. Click here to join our channel and stay updated with the latest news.

Next