Advertisement

ಶತಮಾನಗಳಿಂದ ಛಾಪು ಬಿಟ್ಟು ಕೊಡದ ಮೈಸೂರು ಸ್ಯಾಂಡಲ್‌ ಉತ್ಪನ್ನ

02:53 PM Mar 04, 2017 | Team Udayavani |

ಹುಬ್ಬಳ್ಳಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಮೈಸೂರು ಸ್ಯಾಂಡಲ್‌ ಸೋಪ್‌ ತನ್ನದೇಯಾದ ಗುಣಮಟ್ಟ ಕಾಯ್ದುಕೊಂಡು ಬಂದಿದ್ದು, ಶತಮಾನಗಳಿಂದ ತನ್ನ ಛಾಪು ಬಿಟ್ಟು ಕೊಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಇಲ್ಲಿನ ದೇಶಪಾಂಡೆ ನಗರದ ಗುಜರಾತ ಭವನದಲ್ಲಿ ಕರ್ನಾಟಕ ಸಾಬೂನು ನಿಗಮ ಆಯೋಜಿಸಿರುವ 11 ದಿನಗಳ ಸಾಬೂನು ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಇನ್ನುಳಿದ ಕಂಪೆನಿಗಳು ರಾಸಾಯನಿಕ ಬಳಸಿ ಸಾಬೂನುಗಳನ್ನು ಉತ್ಪಾದಿಸುತ್ತಿದೆ. ಕರ್ನಾಟಕ ಸಾಬೂನು ನಿಗಮ ಕಳೆದ 2-3 ವರ್ಷಗಳಿಂದ ನೈಸರ್ಗಿಕ, ಸಾವಯವ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ನಗರದಲ್ಲಿ ಪ್ರತಿವರ್ಷ ಮೇಳ ಆಯೋಜಿಸುವ ಮೂಲಕ ಜನರಿಗೆ ಶೇ. 10ರಿಂದ 20ರಷ್ಟು ರಿಯಾಯ್ತಿ ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕರ್ನಾಟಕ ಸಾಬೂನು ನಿಗಮ ನಷ್ಟದಿಂದ ಹೊರ ಬಂದು ಲಾಭದತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ. ತಾನು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದರೆ ಲಾಭ ಹೊಂದಬಹುದು. ಇದಕ್ಕೆ ಬಾಬಾ ರಾಮದೇವ ಅವರೇ ಸಾಕ್ಷಿ.

ಅವರು ಮಾರಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುವ ಮೂಲಕ ಬಹು ರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳಿಗೆ ಹೊಡೆತ ಕೊಡುತ್ತಿದ್ದಾರೆ. ಅದನ್ನು ನೋಡಿಕೊಂಡು ನಾವು ಮುಂದುವರಿಯಬೇಕು ಎಂದರು. ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಹಾಪೌರ ಮಂಜುಳಾ ಅಕ್ಕೂರ, ಮಾಜಿ ಸಂಸದ ಪ್ರೊ|ಐ.ಜಿ. ಸನದಿ,

ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಲೀನಾ ಮಿಸ್ಕಿನ್‌, ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಅನಿಲ ರಾಮಪಾಲ್‌, ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀನಿವಾಸ ರೆಡ್ಡಿ, ಉಳ್ಳಯ್ಯ ಮೊದಲಾದವರಿದ್ದರು. ಸಾಬೂನು ಮೇಳದಲ್ಲಿ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಅಗರಬತ್ತಿ ಸೇರಿದಂತೆ ಸುಮಾರು 38 ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ. ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಮೇಳ ಇರುತ್ತದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next