ಬೆಳಗಾವಿ: ದಿನದಿನಕ್ಕೂ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಸೋಂಕಿತರ ಚಿಕಿತ್ಸೆ ಹಾಗೂ ಆರೈಕೆ ಮಾಡುತ್ತಿರುವ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ಪ್ರತಿ ದಿನ ಕನಿಷ್ಠ 150ಕ್ಕೂ ಹೆಚ್ಚು ವೈಯಕ್ತಿಕ ಸುರಕ್ಷತಾ ಕಿಟ್ (ಪಿಪಿಇ)ಗಳನ್ನು ಬಳಸುತ್ತಿದ್ದು, ಈವರೆಗೆ 9 ಸಾವಿರಕ್ಕೂ ಹೆಚ್ಚು ಪಿಪಿಇ ಕಿಟ್ ಗಳ ಬಳಕೆ ಆಗಿದೆ.
ಒಬ್ಬರಿಂದ ಒಬ್ಬರಿಗೆ ಹರಡುವ ಕೋವಿಡ್ ಮಹಾಮಾರಿ ರೋಗ ತಗುಲದಂತೆ ತಡೆಯಲು ಪಿಪಿಇ ಅತ್ಯವಶ್ಯಕವಾಗಿದೆ. ಸೋಂಕಿತರಿಗೆ ದಿನಾಲೂ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ವಾರ್ಡ್ ಬಾಯ್ ಸೇರಿದಂತೆ ಇತರರು ತಮ್ಮ ಸುರಕ್ಷತೆಗೆ ಪಿಪಿಇ ಕಿಟ್‌ಗಳನ್ನೇ ಅವಲಂಬಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮಾ.15ರಿಂದಲೇ ಕಿಟ್ ಬಳಕೆ ಆರಂಭಗೊಂಡಿದೆ. ಜಿಲ್ಲಾಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿಕೊಂಡೇ ವೈದ್ಯರು ಹಾಗೂ ನರ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಸುಮಾರು ಏನಿಲ್ಲವೆಂದರೂ 150 ಪಿಪಿಇ ಕಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಎರಡು ತಿಂಗಳ ಅವಧಿಯಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಕಿಟ್‌ಗಳು ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಬಳಕೆ ಆಗಿರುವುದು ವಿಶೇಷವಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಬಳಕೆ: ಪಿಪಿಇ ಕಿಟ್‌ಗಳಿಲ್ಲದೇ ಯಾರೊಬ್ಬರೂ ಕೋವಿಡ್ -19 ವಾರ್ಡ್ ಪ್ರವೇಶಿಸುವಂತಿಲ್ಲ. ಕೋವಿಡ್-19 ವಾರ್ಡ್ ಪ್ರವೇಶಿಸುವ ವೈದ್ಯರು, ಶುಶ್ರೂಷಕಿಯರು, ವಾರ್ಡ್ ಬಾಯ್‌ಗಳು, ಬೇರೆ ಆಸ್ಪತ್ರೆಗಳಿಂದ ಬರುವ ವೈದ್ಯರು, ವಾರ್ಡ್ ಪರಿಶೀಲನೆಗೆ ಬರುವ ಅಧಿಕಾರಿಗಳು, ವಾರ್ಡ್‌ದಲ್ಲಿ ವಿದ್ಯುತ್ ಕೆಲಸ, ಪೈಪಿಂಗ್ ಕೆಲಸ, ಅಡುಗೆ ಪೂರೈಸಲು ಬರುವವರು ಕಡ್ಡಾಯವಾಗಿ ಪಿಪಿಇ ಕಿಟ್‌ಗಳನ್ನು ಬಳಸುತ್ತಿದ್ದಾರೆ. ಗರಿಷ್ಠ ಆರು ಗಂಟೆವರೆಗೂ ಒಬ್ಬ ವ್ಯಕ್ತಿ ಈ ಕಿಟ್ ಧರಿಸಬಹುದಾಗಿದೆ.
ನಿತ್ಯ ತ್ಯಾಜ್ಯ ವಿಲೇವಾರಿ: ಪಿಪಿಇ ಕಿಟ್ ಬಳಕೆಯಾದ ಬಳಿಕ ಅದು ತ್ಯಾಜ್ಯವಾಗಿ ಮಾರ್ಪಾಡಾಗುತ್ತದೆ. ಇದನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲವಾಗಿದೆ. ಪಿಪಿಇ ಕಿಟ್ ತ್ಯಾಜ್ಯ ಹೊರತುಪಡಿಸಿ ಇತರೆ ತ್ಯಾಜ್ಯವೂ ಈ ಕೋವಿಡ್-19 ಆಸ್ಪತ್ರೆಯಿಂದ ಉತ್ಪತ್ತಿಯಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ವಾಹನ, ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಬೆಳಗ್ಗೆ ಬಂದು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವಲ್ಲಿ ನಿರತರಾಗುತ್ತಾರೆ. ಈ ಸಿಬ್ಬಂದಿಗಳೂ ಪಿಪಿಇ ಕಿಟ್ ಧರಿಸಿ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ.
ಈ ತ್ಯಾಜ್ಯದಲ್ಲಿ ಪಿಪಿಇ ಕಿಟ್‌ಗಳು, ಮಾಸ್ಕ್, ರೋಗಿಗಳ ಡ್ರೆಸಿಂಗ್‌ಗೆ ಬಳಸಿದ ಹತ್ತಿ ಸೇರಿದೆ. ಜತೆಗೆ ಕೊರೊನಾ ರೋಗಿಗಳಗಂಟಲು ಸ್ರಾವ, ಕಫದ ಮಾದರಿಗಳನ್ನು ತೆಗೆಯಲು ಬಳಸಿದ ವಸ್ತುಗಳು, ಸಿರಿಂಜ್, ಮಾತ್ರೆ ಪಾಕೆಟ್‌ಗಳು, ಗ್ಲೂಕೋಸ್ ಬಾಟಲಿ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನೂ ವಿಲೇವಾರಿ ಮಾಡಲಾಗುತ್ತದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಪಿಪಿಇ ಕಿಟ್‌ಗಳ ಬಳಕೆ ಹೆಚ್ಚುತ್ತಿದೆ. ಇದರಿಂದಲೇ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯವೂ ಸಂಗ್ರಹವಾಗುತ್ತಿದೆ. ಕೋವಿಡ್ ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಪ್ಯಾಕ್ ಮಾಡಿ ಕೋವಿಡ್ ತ್ಯಾಜ್ಯ ಎಂದು ಬರೆದು ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲಿದೆ.
ಸೋಂಕಿತ ಮಕ್ಕಳನ್ನು ದೂರದಿಂದಲೇ ನೋಡಿ ಕಣ್ಣೀರು ಸುರಿಸಿದ ತಾಯಿ! : ಬೆಳಗಾವಿಯ ಕೋವಿಡ್ ಆಸ್ಪತ್ರೆಯಲ್ಲಿ 18 ವರ್ಷದೊಳಗಿನ 17 ಮಕ್ಕಳು ದಾಖಲಾಗಿದ್ದಾರೆ. ಈ ಎಲ್ಲರಿಗೂ ಕೋವಿಡ್ ಪಾಸಿಟಿವ್ ದೃಢವಾಗಿದೆ. ಇಂಥ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ. ಈ ಮಕ್ಕಳ ಪೋಷಕರು ಭೇಟಿಯಾಗಲು ಅವಕಾಶ ಇಲ್ಲ. ಬೇರೆ ವಾರ್ಡ್‌ದಲ್ಲಿ ನಿಂತು ದೂರದಿಂದಲೇ ಮಕ್ಕಳನ್ನು ನೋಡಬಹುದಾಗಿದೆ. ನಿತ್ಯ ತಮ್ಮ ಮಕ್ಕಳನ್ನು ನೋಡಿ ತಾಯಂದಿರರು ಕಣ್ಣೀರು ಸುರಿಸುತ್ತಿರುವ ದೃಶ್ಯ ಮನಕಲಕುವಂತಿದೆ. ತಾಯಂದಿರಿಗೂ ಪಿಪಿಇ ಕಿಟ್‌ಗಳನ್ನು ನೀಡಲಾಗುತ್ತದೆ.
–ಭೈರೋಬಾ ಕಾಂಬಳೆ