Advertisement

ನಗರದಲ್ಲಿ ಮಿತಿ ಮೀರಿದ ಶಬ್ದ ಮಾಲಿನ್ಯ ಪ್ರಮಾಣ

12:27 PM Apr 11, 2017 | Team Udayavani |

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ 7 ನಗರಗಳಲ್ಲಿ ಶಬ್ದ ಮಾಲಿನ್ಯದ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದೆ ಎಂದು ಪರಿಸರ ಸಚಿವ ಅನಿಲ್‌ ಮಾಧವ್‌ ದವೆ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖೀತ ಉತ್ತರ ನೀಡುವ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ.

Advertisement

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯು ಎಲ್ಲ ರಾಜ್ಯಗಳಲ್ಲಿನ ಮಂಡಳಿಗಳೊಂದಿಗೆ ಸೇರಿ ಶಬ್ದ ಮಾಲಿನ್ಯದ ಕುರಿತು ನಿಗಾವಹಿಸಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಲಕ್ನೋ ಮತ್ತು ಹೈದರಾಬಾದ್‌ನಲ್ಲಿ 70 ಶಬ್ದ ಮೇಲ್ವಿಚಾರಣಾ ಕೇಂದ್ರಗಳ ಮೂಲಕ ಪರಿಶೀಲನೆ ಕಾರ್ಯ ಆರಂಭಿಸಿತ್ತು.

ವಾಹನಗಳ ಹಾರ್ನ್ ಸೇರಿದಂತೆ ವಿವಿಧ ಶಬ್ದಗಳನ್ನು ಅಧ್ಯಯನ ನಡೆಸಿ, ಈ ಏಳೂ ನಗರಗಳಲ್ಲಿ ಶಬ್ದ ಮಾಲಿನ್ಯದ ಸರಾಸರಿ ಮಟ್ಟವು ಸಾಮಾನ್ಯವಾಗಿ ಇರುವಂಥ ಅನುಮತಿಯ ಮಿತಿಗಿಂತ ಹೆಚ್ಚಿರುತ್ತದೆ ಎಂಬುದನ್ನು ಪತ್ತೆಹಚ್ಚಿದೆ ಎಂದಿದ್ದಾರೆ ಸಚಿವ ದವೆ.

ಇದೇ ವೇಳೆ, ಕೇಂದ್ರ ಮೋಟಾರು ವಾಹನಗಳ ಕಾಯ್ದೆ-1989ರ ಪ್ರಕಾರ ಪೊಲೀಸ್‌ ವ್ಯಾನ್‌, ಆ್ಯಂಬುಲೆನ್ಸ್‌ ಮತ್ತು ಅಗ್ನಿಶಾಮಕ ವಾಹನಗಳು ಹೊರತುಪಡಿಸಿ ಇತರೆ ಯಾವುದೇ ವಾಹನಗಳಲ್ಲೂ ಪ್ರಷರ್‌ ಹಾರ್ನ್(ಸೈರನ್‌ಗಳು ಹಾಗೂ ಬಹು-ಧ್ವನಿಯ ಹಾರ್ನ್ಗಳು)ಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ ಎಂದೂ ಸಚಿವ ದವೆ ಸ್ಪಷ್ಟಪಡಿಸಿದ್ದಾರೆ.

10 ಕಡೆ ಕೇಂದ್ರ: ಶಬ್ದಮಾಲಿನ್ಯದ ಮಟ್ಟವೆಷ್ಟು ಎಂಬುದನ್ನು ಅರಿಯಲು ಬೆಂಗಳೂರಿನಲ್ಲಿ ಪರಿಸರ ಭವನ, ಪೀಣ್ಯ, ನಿಸರ್ಗ ಭವನ, ಮಾರತಹಳ್ಳಿ, ಬಿಟಿಎಂ, ಯಶವಂತಪುರ, ಆರ್‌.ವಿ.ಸಿ.ಇ, ವೈಟ್‌ಫೀಲ್ಡ್‌, ದೊಮ್ಮಲೂರು ಹಾಗೂ ನಿಮ್ಹಾನ್ಸ್‌ ಬಳಿ ಶಬ್ದಮಾಲಿನ್ಯ ನಿಗಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.

Advertisement

ಇವುಗಳನ್ನು ವಸತಿ ವಲಯ, ವಾಣಿಜ್ಯ ವಲಯ, ಮೌನ ವಲಯ ಹಾಗೂ ಕೈಗಾರಿಕಾ ವಲಯವೆಂದು ವಿಂಗಡಿಸಲಾಗಿತ್ತು. 2015ರಲ್ಲಿ ನಡೆಸಿದ ಈ ಸರ್ವೆಯಲ್ಲಿ ಪ್ರತಿದಿನ, ಪ್ರತಿ ತಿಂಗಳು ಹಾಗೂ ವಾರ್ಷಿಕ ಮಾಲಿನ್ಯದ ಮಟ್ಟವೆಂದು ವಿಭಜಿಸಿ ವರದಿ ನೀಡಲಾಗಿತ್ತು.

ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿವು: ಮೆಟ್ರೋಪಾಲಿಟನ್‌ ನಗರಗಳಲ್ಲಿ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ದೀಪಾವಳಿ ಸಂದರ್ಭದಲ್ಲಿ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಲೆಂದೇ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಜತೆಗೆ, ಜನರಲ್ಲಿ ಮಾಲಿನ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ಶಬ್ದ ಮಾಲಿನ್ಯ(ನಿಯಂತ್ರಣ ಮತ್ತು ನಿಬಂಧನೆ) ನಿಯಮಗಳು-2000ದ ಪ್ರಕಾರ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಶಬ್ದ ಮಾಡುವ ಧ್ವನಿವರ್ಧಕಗಳ ಬಳಕೆಗೆ, ಮಾಲಿನ್ಯ ಉಂಟುಮಾಡುವಂಥ ಹಾರ್ನ್ಗಳು ಹಾಗೂ ನಿರ್ಮಾಣ ಕಾಮಗಾರಿಯಲ್ಲಿ ಬಳಸಲಾಗುವ ಹೆಚ್ಚು ಶಬ್ದ ಮಾಡುವ ಉಪಕರಣಗಳಿಗೆ ನಿಷೇಧ ಹೇರಿದೆ.

ಎಲ್ಲೆಲ್ಲಿ ಎಷ್ಟೆಷ್ಟು?
ಬಿಟಿಎಂ ಲೇಔಟ್‌ ಪ್ರದೇಶದಲ್ಲಿ ಹಗಲು ಮತ್ತು ರಾತ್ರಿ ಹೊತ್ತು ಶಬ್ದ ಮಾಲಿನ್ಯವು ಮಿತಿಗಿಂತ ಶೇ.100ರಷ್ಟು ಹೆಚ್ಚಾಗಿರುವುದು ಕಂಡುಬಂದರೆ, ಮಾರತಹಳ್ಳಿಯಲ್ಲಿ ಹಗಲು ಹೊತ್ತು ಮಾಲಿನ್ಯವು ಮಿತಿಯನ್ನು ಮೀರಿತ್ತು. ರಾತ್ರಿ ಹೊತ್ತು ಶೇ.88ರಷ್ಟು ಮೀರಿರುವುದು ಕಂಡುಬಂದಿತ್ತು. ಇನ್ನು ನಿಮ್ಹಾನ್ಸ್‌ನಲ್ಲೂ ಹಗಲು, ರಾತ್ರಿಯೂ ಶಬ್ದಮಾಲಿನ್ಯ ಮಿತಿಯನ್ನು ದಾಟಿರುವುದು ಖಚಿತವಾಗಿದೆ. ಯಶವಂತಪುರದಲ್ಲೂ ಈ ಸ್ಥಿತಿ ಭಿನ್ನವಾಗಿಲ್ಲ. ಆದರೆ, ವೈಟ್‌ಫೀಲ್ಡ್‌ನಲ್ಲಿ ಮಾಲಿನ್ಯವು ಮಿತಿಗಿಂತ ಹೆಚ್ಚಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next