ಬೆಂಗಳೂರು: ದಕ್ಷಿಣ ಭಾರತದ ಅತಿ ಹೆಚ್ಚು ವಿಮಾನಗಳ ಸಂಚಾರದಟ್ಟಣೆ ಹೊಂದಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸಕ್ತ ಸಾಲಿನ ಮೊದಲ ತ್ತೈಮಾಸಿಕ ಫಲಿತಾಂಶ ಪ್ರಕಟಗೊಂಡಿದ್ದು, ಈ ಅವಧಿಯಲ್ಲಿ ಪ್ರಯಾಣಿಕರು ಮತ್ತು ವಿಮಾನಗಳ ಸಂಚಾರದಲ್ಲಿ ಶೇ. 32.9ರಷ್ಟು ಪ್ರಗತಿ ಸಾಧಿಸಿದೆ.
ಮೊದಲ ಮೂರು ತಿಂಗಳಲ್ಲಿ (ಏಪ್ರಿಲ್-ಜೂನ್) ಈ ವಿಮಾನ ನಿಲ್ದಾಣದ ಮೂಲಕ 80ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ 60 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಈ ತ್ತೈಮಾಸಿಕದ ಕೊನೆಯ ದಿನ ಅಂದರೆ ಜೂನ್ 30 ಅತಿಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ದಿನವಾಗಿದ್ದು, ಒಂದೇ ದಿನದಲ್ಲಿ 98,869 ಜನ ಪ್ರಯಾಣಿಸಿದ್ದಾರೆ.
ಅದೇ ರೀತಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದ್ದು, ಕ್ರಮವಾಗಿ ಶೇ. 35.08 ಹಾಗೂ ಶೇ. 16.08ರಷ್ಟು ವೃದ್ಧಿಯಾಗಿದೆ. ಇನ್ನು ಮೊದಲ ತ್ತೈಮಾಸಿಕದಲ್ಲಿ ಸಂಚರಿಸಿದ ಒಟ್ಟಾರೆ 80 ಲಕ್ಷ ಜನರಲ್ಲಿ 10.08 ಲಕ್ಷ ಅಂತಾರಾಷ್ಟ್ರೀಯ ಹಾಗೂ 6.94 ಲಕ್ಷ ದೇಶೀಯ ಪ್ರಯಾಣಿಕರಾಗಿದ್ದಾರೆ.
ವಿಮಾನಗಳ ಹಾರಾಟದಲ್ಲೂ ಶೇ. 32.9ರಷ್ಟು ಏರಿಕೆಯಾಗಿದ್ದು, 58,054 ವಿಮಾನಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಾರ್ಯಾಚರಣೆ ನಡೆಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 43,673 ವಿಮಾನಗಳು ಹಾರಾಟ ನಡೆಸಿದ್ದವು. ಮೇ 4ರಂದು ಅತ್ಯಧಿಕ ವಿಮಾನಗಳ ಸಂಚಾರದಟ್ಟಣೆ ಇತ್ತು. ಅಂದು ಒಂದೇ ದಿನ 685 ವಿಮಾನಗಳು ಆಗಮನ-ನಿರ್ಗಮನ ಆಗಿವೆ.
ಸರಕು-ಸಾಗಣೆಯಲ್ಲೂ ವೃದ್ಧಿ: ಸರಕು ಸಾಗಣೆಯಲ್ಲಿ ಶೇ. 16.6 ಪ್ರಗತಿ ಸಾಧಿಸಿದೆ. ಮೂರು ತಿಂಗಳಲ್ಲಿ 97,476 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಲಾಗಿದೆ. ಈ ಪೈಕಿ ಜೂನ್ ತಿಂಗಳಲ್ಲೇ 34,398 ಮೆಟ್ರಿಕ್ ಟನ್‌ನಷ್ಟು ಸರಕು ವಿಮಾನಗಳಲ್ಲಿ ಸಾಗಣೆಯಾಗಿದೆ.
2017ರ ಮೊದಲ ತ್ತೈಮಾಸಿಕದಲ್ಲಿ 83,584 ಮೆಟ್ರಿಕ್ ಟನ್‌ಗಳಷ್ಟು ಸರಕು ಸಾಗಣೆ ಮಾಡಲು ಸಾಧ್ಯವಾಗಿತ್ತು. ಎಂಟು ದೇಶೀಯ ಮತ್ತು 25 ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಒಟ್ಟಾರೆ 67 ಕಡೆಗಳಲ್ಲಿ ಸಂಪರ್ಕ ಕಲ್ಪಿಸಿವೆ ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್ ತಿಳಿಸಿದ್ದಾರೆ.