Advertisement
ಕಳೆದೊಂದು ವಾರದಿಂದ ನಗರದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಶುಕ್ರವಾರ ಸುರಿದ ಭಾರಿ ಮಳೆ ಹಾಗೂ ಶನಿವಾರ ಆಲಿಕಲ್ಲು ಸಮೇತ ಸುರಿದ ಮಳೆಗೆ 250ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ತಗ್ಗು ಪ್ರದೇಶಗಳಲ್ಲಿರುವ ನೂರಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ. ಜತೆಗೆ ನಗರದಲ್ಲಿ 70ಕ್ಕೂ ಹೆಚ್ಚು ಭಾಗಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ.
Related Articles
Advertisement
ಅಂಡರ್‌ಪಾಸ್‌ಗಳು ಜಲಾವೃತ!: ನಗರದಲ್ಲಿ ಶುಕ್ರವಾರ ಸುರಿದ ಮಳೆಗೆ ನಗರದ ಅಂಡರ್ ಪಾಸ್ ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಗರದಲ್ಲಿ ಶುಕ್ರವಾರ ಹಾಗೂ ಶನಿವಾರ ಸುರಿದ ಮಳೆಯಿಂದಾಗಿ ನೂರಾರು ಮನೆಗಳಿಗೆ ನೀರು ನುಗ್ಗಿ ಜನರ ನಿದ್ದೆಗೆಡಿಸಿದೆ. ಇದರೊಂದಿಗೆ ನಗರ ಕೇಂದ್ರ ಭಾಗದಲ್ಲಿರುವ ರಿಚ್‌ಮಂಡ್‌ಟೌನ್, ಕಲಾಸಿಪಾಳ್ಯ, ಬಂಬೂಬಜಾರ್, ಸಹಕಾರ ನಗರ, ಆರ್.ಕೆ.ಗಾರ್ಡನ್, ಸಂಪಂಗಿರಾಮನಗರ,
ಶಾಂತಿನಗರ, ಮಡಿವಾಳ, ಕೃಪಾನಿಧಿ ಲೇಔಟ್, ಅಂಜನಾಪುರ, ಬೆಳ್ಳಂದೂರು, ವಿಜಿನಾಪುರ, ಕೆಂಪಾಪುರ, ಅರೆಕೆರೆ, ಶಾಂತಿನಗರ, ಚಿಕ್ಕಲಸಂದ್ರ, ಉತ್ತರಹಳ್ಳಿ, ಅಕ್ಷಯ ನಗರ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್‌ನಲ್ಲಿ ಹಲವು ತಗ್ಗು ಪ್ರದೇಶಗಳಲಿರುವ ಮನೆಗಳಿಗೆ ನೀರು ನುಗ್ಗಿದೆ. ಮಳೆನೀರು ಕಾಲುವೆಗಳು ಉಕ್ಕಿ ಹರಿದು ಅಕ್ಷಯ ನಗರ ಮತ್ತು ಬೊಮ್ಮನಹಳ್ಳಿಯ ಕೆಲ ಪ್ರದೇಶಗಳಲ್ಲಿ ಎರಡು ಮೂರು ಅಡಿಯಷ್ಟು ನೀರು ನಿಂತ ದೃಶ್ಯ ಕಂಡುಬಂದಿದೆ.
ಬೆಸ್ಕಾಂಗೆ ದೂರುಗಳ ಪ್ರವಾಹ: ಶುಕ್ರವಾರ ರಾತ್ರಿ 12ರಿಂದ ಶನಿವಾರ ರಾತ್ರಿವರೆಗೆ ಸುರಿದ ಮಳೆಯಿಂದಾಗಿ ಬೆಸ್ಕಾಂ ನಿರ್ವಹಣಾ ಕೊಠಡಿಗೆ ದೂರುಗಳ ಪ್ರವಾಹವೇ ಹರಿದು ಬಂದಿವೆ. ಶುಕ್ರವಾರ ರಾತ್ರಿಯಿಂದ ಶನಿವಾರ ರಾತ್ರಿವರೆಗೆ 6000ಕ್ಕೂ ಅಧಿಕ ದೂರುಗಳು ಬಂದಿದ್ದು, ಮೂರು ಸಾವಿರಕ್ಕೂ ಅಧಿಕ ದೂರುಗಳಿಗೆ ಬೆಸ್ಕಾಂ ಸಿಬ್ಬಂದಿ ಸ್ಪಂದಿಸಿದ್ದಾರೆ.
ಶುಕ್ರವಾರದಿಂದ ಶನಿವಾರ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ಸುಮಾರು 80 ವಿದ್ಯುತ್ ಕಂಬಗಳು ಮುರಿದಿವೆ. ಮರ ಹಾಗೂ ಮರದ ಕೊಂಬೆ ಬಿದ್ದ ಪರಿಣಾಮ ಹಲವೆಡೆ ವಿದ್ಯುತ್ ಕಂಬ ನೆಲಕ್ಕುರುಳಿವೆ. ಚಾಮರಾಜಪೇಟೆ, ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶ, ಆರ್.ಆರ್. ನಗರ, ಬೊಮ್ಮನಹಳ್ಳಿ, ಉತ್ತರಹಳ್ಳಿ ಉಳಿದ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿವೆ.
ದಿನವಿಡೀ ಕಾರ್ಯಾಚರಣೆ: ಶುಕ್ರವಾರ ಸುರಿದ ಮಳೆಯಿಂದಾಗಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಮೇಯರ್ ಹಾಗೂ ಅಧಿಕಾರಿಗಳ ತಂಡ ಸಮಸ್ಯೆಗಳ ಪರಿಹಾರಕ್ಕೆ ಮುಂದಾಯಿತು. ಶುಕ್ರವಾರ ರಾತ್ರಿ 8 ಗಂಟೆಗೆ ಸ್ವತಃ ಮೇಯರ್ ಜಿ.ಪದ್ಮಾವತಿ ಅವರೇ ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಸಾರ್ವಜನಿಕರಿಂದ ಕರೆಗಳನ್ನು ಸ್ವೀಕರಿಸಿ ನೆರವಿಗೆ ಮುಂದಾಗುವಂತೆ ತುರ್ತು ನಿರ್ವಹಣಾ ತಂಡಗಳಿಗೆ ಸೂಚನೆ ನೀಡಿದರು.
ಶನಿವಾರವೂ ನಿರ್ವಹಣಾ ಕೊಠಡಿಗೆ ಆಗಮಿಸಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ಅವರು, ತಡರಾತ್ರಿಯವರೆಗೆ ಅನಾಹುತಕ್ಕೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು. ಶನಿವಾರ ಮುಂಜಾನೆ 4 ಗಂಟೆಯಿಂದ ಕಾರ್ಯಾಚರಣೆಗೆ ಮುಂದಾದ ಮೇಯರ್ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಸ್ಥಳದಲ್ಲಿ ನಿಂತು ಮರಗಳನ್ನು ತೆರವುಗೊಳಿಸಿದರು. ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಸೂಚನೆಯಂತೆ ಕಳೆದ ವರ್ಷ ಮಳೆಯಿಂದ ಅನಾಹುತ ಸಂಭವಿಸಿದ ಕೋಡಿಚಿಕ್ಕನಹಳ್ಳಿ, ಅವನಿಶೃಂಗೇರಿ ನಗರ, ಅರಕೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆನ ತಡೆಯೋಕ್ಕೆ ಆಗುತ್ತೇನ್ರಿ?ಬೆಂಗಳೂರು: ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಗುತ್ತಿರುವ ಆವಾಂತರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಧ್ಯಮದವರು ಪ್ರಶ್ನಿಸಿದರೆ, “ಮಳೆ ಬಂದ್ರೆ ಸರ್ಕಾರ ಏನ್ ಮಾಡೋಕ್ ಆಗುತ್ತೆ?’ ಎಂದು ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯ ತಿಥಿ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, “ಮಳೆನೇ ಬರಬಾರದೇನ್ರಿ? ಮಳೆ ಬರದ ಹಾಗೆ ಸರ್ಕಾರ ಏನಾದರೂ ಮಾಡೋಕ್ ಆಗುತ್ತಾ ?ಆ ರೀತಿಯ ತಂತ್ರಜ್ಞಾನ ಏನಾದರೂ ಇದಿಯಾ?’ ಎಂದೂ ಮಾಧ್ಯಮಗಳನ್ನು ಅವರು ಪ್ರಶ್ನಿಸಿದ್ದಾರೆ. “ಉದಯವಾಣಿ’ ಮೊದಲೇ ಎಚ್ಚರಿಸಿತ್ತು!
ನಗರದಲ್ಲಿ ಹರಿಯುವಂತಹ ಮಳೆನೀರುಗಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಹಾಗೂ ಕಾಲುವೆಗಳ ಸ್ಥಿತಿಗತಿ ಕುರಿತು “ರಾಜಕಾಲುವೆ ಅರಾಜಕತೆ’ ಎಂಬ ಶೀರ್ಷಿಕೆಯಡಿಯಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸಿದ್ದ “ಉದಯವಾಣಿ’ ಪಾಲಿಕೆಯನ್ನು ಎಚ್ಚರಿಸುವುದರೊಂದಿಗೆ, ಮಳೆಗಾಲದಲ್ಲಿ ಅನಾಹುತ ಉಂಟಾಗದಂತೆ ಪಾಲಿಕೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿತ್ತು. ಅದಾದ ನಂತರವೂ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಜನ ತೊಂದರೆ ಅನುಭವಿಸುವಂತಾಗಿದೆ.