ಕಾಬೂಲ್: ಬಂಡುಕೋರ ಉಗ್ರರು ಇಂದು ಬೆಳಗ್ಗೆ ಅಫ್ಘಾನಿಸ್ಥಾನದ ಬೃಹತ್ ಮಿಲಿಟರಿ ಆಸ್ಪತ್ರೆಗೆ ವೈದ್ಯರ ಉಡುಗೆಯಲ್ಲಿ ಪ್ರವೇಶಿಸಿ ಗುಂಡಿನ ದಾಳಿ ನಡೆಸಿ ಸ್ಫೋಟ ಎಸಗಿದ್ದಾರೆ. ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಬಂಡುಕೋರರ ಈ ದಾಳಿಗೆ ಐಸಿಸ್ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಸುಮಾರು 6 ಗಂಟೆ ಕಾಲ ಉಗ್ರರು ನಡೆಸಿದ ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ.
ವಸಂತ ಕಾಲದ ಸಂದರ್ಭದಲ್ಲಿ ವರ್ಷಂಪ್ರತಿ ದಾಳಿ ನಡೆಸುವ ಪರಿಪಾಠ ಹೊಂದಿರುವ ತಾಲಿಬಾನ್ ಉಗ್ರ ಸಂಘಟನೆ ಈ ಬಾರಿ ಸರ್ದಾರ್ ದಾವೂದ್ ಖಾನ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ.
ಆಸ್ಪತ್ರೆ ಆಡಳಿತಾಧಿಕಾರಿಗಳ ಪ್ರಕಾರ ಮೂವರು ಬಂದೂಕುಧಾರಿಗಳು 400 ಹಾಸಿಗೆ ಸೌಕರ್ಯವಿರುವ ಮಿಲಿಟರಿ ಆಸ್ಪತ್ರೆಯೊಳಗೆ ಸ್ಫೋಟ ಸಂಭವಿಸಿದ ಬಳಿಕ ಲ್ಯಾಬೋರೇಟರಿ ಕೋಟ್‌ಗಳನ್ನು ಧರಿಸಿಕೊಂಡು ಒಳಪ್ರವೇಶಿಸಿದ್ದಾರೆ.
ಉಗ್ರರು ಆಸ್ಪತ್ರೆಯೊಳಗೆ ಮನಬಂದಂತೆ ಎಲ್ಲೆಂದರಲ್ಲಿ ಗುಂಡು ಹಾರಿಸುತ್ತಿದ್ದಾರೆ; ನಾವು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಆಡಳಿತಗಾರ ಅಬ್ದುಲ್ ಹಕೀಮ್ ಅವರು ಎಎಫ್ಪಿಗೆ ಫೋನ್‌ನಲ್ಲಿ ತಿಳಿಸಿದ್ದಾರೆ.
ಕಾಬೂಲ್ ನಲ್ಲಿ ಎರಡು ಭದ್ರತಾ ಆವರಣದೊಳಗೆ ಕಳೆದ ವಾರ ತಾಲಿಬಾನ್ ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಿ 16 ಮಂದಿಯನ್ನು ಬಲಿತೆಗೆದುಕೊಂಡ ಬೆನ್ನಿಗೇ ಇಂದಿನ ದಾಳಿ ನಡೆದಿದೆ.