ಬಳ್ಳಾರಿ: ಜಿಲ್ಲೆಯ ಅಂಕಸಮುದ್ರ ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಈಚೆಗೆ ಪಕ್ಷಿಗಳಸಮೀಕ್ಷಾ ಕಾರ್ಯ ನಡೆದಿದ್ದು, 120 ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿದೆ. ವಿದೇಶದಲ್ಲಿ ಅಳಿವಿನ ಅಂಚಿನಲ್ಲಿರುವ ಹಲವು ಪ್ರಭೇದದ ಪಕ್ಷಿಗಳು ಇಲ್ಲಿ ಕಾಣಿಸಿಕೊಂಡಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದಲ್ಲಿನ 244.04 ಎಕರೆಯುಳ್ಳ ಕೆರೆ ಪ್ರದೇಶದಲ್ಲಿ ದೇಶ ಸೇರಿ ವಿದೇಶಗಳಿಂದಲೂ ನೂರಾರು ಪ್ರಭೇದದ ಪಕ್ಷಿಗಳು ವಲಸೆ ಬರುತ್ತಿದ್ದು, ಜನರು ಮತ್ತು ಪಕ್ಷಿ ಪ್ರಿಯರನ್ನು ಆಕರ್ಷಿಸುತ್ತಿವೆ.
ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬರುವುದರಿಂದ ರಾಜ್ಯ ಸರ್ಕಾರ 2017ರಲ್ಲಿ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶವನ್ನಾಗಿ ಘೋಷಿಸಿ ಆದೇಶ ಹೊರಡಿಸಿತು. ಆದರೆ, ಈ ಕೆರೆ ಅಭಿವೃದ್ಧಿ ಮತ್ತು ಪಕ್ಷಿಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜಿಲ್ಲಾ ಅರಣ್ಯ ಇಲಾಖೆಯು ಹ.ಬೊ.ಹಳ್ಳಿ ಗ್ರೀನ್ ಎಚ್‌ಬಿಎಚ್ ಸಂಘಟನೆ, ಸ್ಥಳೀಯ ಪಕ್ಷಿ ಪ್ರೇಮಿಗಳ ಸಹಯೋಗದೊಂದಿಗೆ ಪಕ್ಷಿಗಳ ಗಣತಿ ಬಗ್ಗೆ ವಿಶೇಷ ಪರಿಣತಿ ಹೊಂದಿದ್ದ ದೆಹಲಿಯ ಸಂಶೋಧಕ ತರುಣ್ ಕೆ.ರಾಯ್ ಅವರ ನೇತೃತ್ವದಲ್ಲಿ ಡಿ.15, 16 ರಂದು ಎರಡು ದಿನಗಳ ಕಾಲ ಸಮೀkfxA ಕಾರ್ಯ ನಡೆಸಲಾಗಿದ್ದು, 120ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಕಂಡುಬಂದಿವೆ. ಇದರಲ್ಲಿ ವಿದೇಶದಲ್ಲಿ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳೂ ಅಂಕಸಮುದ್ರದಲ್ಲಿ ಕಂಡುಬಂದಿರುವುದು ವಿಶೇಷ.
ಪತ್ತೆಯಾದ ಪಕ್ಷಿಗಳು: ಪಕ್ಷಿಗಳ ಸಮೀಕ್ಷಾ ಕಾರ್ಯಕ್ಕೆ ಐದು ತಂಡಗಳನ್ನು ರಚಿಸಲಾಗಿದ್ದು, ಪಕ್ಷಿಗಳು ಎರೆಡೆರಡು ಬಾರಿ ಗಣತಿಯಾಗದಂತೆ ಬಾರದಂತೆ ಜಿಪಿಎಸ್ ಟ್ರ್ಯಾಕರ್ ಬಳಸಿ ವೈಜ್ಞಾನಿಕವಾಗಿ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ವಿದೇಶಗಳಲ್ಲಿ ಅಳಿವಿನ ಅಂಚಿನಲ್ಲಿರುವ ಓಪೆನ್ ವರ್‌ಬ್ಲಿರ್, ನಾಬ್ ಬಿಲ್ಡ್ ಡಕ್, ಯುರೇಶಿಯನ್ ವಿಜಯಿನ್, ಕಾಮನ್ ಟೀಲ್, ಓರಿಯಂಟಲ್ ಡರ್ಟರ್, ಲೇಜರ್ ಅಡ್ಜಟೆಂಟ್ ಪಕ್ಷಿಗಳು ಕಂಡುಬಂದಿವೆ. ಇದರಲ್ಲಿ ಓಪೆನ್ ಬಿಲ್ ಸ್ಟಾರ್ಕ್ (ಬಾಯಿ ಕಳಕ) ಪಕ್ಷಿ ಅಂದಾಜು 7-8 ಸಾವಿರ, ಇಂಡಿಯನ್ ಕಾರ್ಮೊರೈಟ್ಸ್ (ನೀರು ಕಾಗೆ) 4-5 ಸಾವಿರ ಪಕ್ಷಿಗಳು, ಪೇಂಟೆಡ್ ಸ್ಟಾರ್ಕ್, ಯೂರೋಪ್, ಅಲಸ್ಕಾ, ಅಂಟಾರ್ಟಿಕಾ ದೇಶಗಳಿಂದವಲಸೆ ಬರುವ ಗಾರ್ಗಿಣಿ, ಪೊಚಾರ್ಡ್, ಬ್ಲಾಕ್ ಟೇಲ್ಡ್ ಗಾಡ್ವಿಟ್, ಪಿನ್‌ಟೇಲ್, ರೆಡ್ ಶ್ಯಾಂಕ್, ವುಡ್ ಸ್ಯಾಂಡ್ ಪೈಪರ್ ಸೇರಿ ಇನ್ನಿತರೆ ಪಕ್ಷಿಗಳನ್ನು ಇಲ್ಲಿ ಗುರುತಿಸಲಾಗಿದೆ. ಒಡೆದು ತಿನ್ನುವ ರ್ಯಾಪ್ಟರ್ ಪಕ್ಷಿಗಳು ಸಹ ಇಲ್ಲಿ ಕಾಣಿಸಿಕೊಂಡಿವೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹ.ಬೊ.ಹಳ್ಳಿಯ ಪಕ್ಷಿಪ್ರೇಮಿ ವಿಜಯ್ ತಿಳಿಸಿದರು.
ಸಮೀಕ್ಷೆ ಉದ್ದೇಶ: ಪಕ್ಷಿಗಳನ್ನು ಆಕರ್ಷಿಸುವ ಅಂಕಸಮುದ್ರ ಕೆರೆ ಅಭಿವೃದ್ಧಿಗೆ ಮತ್ತು ಪಕ್ಷಿಗಳ ಸಂರಕ್ಷಣೆಗೆ ಯಾವ್ಯಾವ ಕ್ರಮಕೈಗೊಳ್ಳಬೇಕು. ಅಲ್ಲಿ ಆಗುತ್ತಿರುವ ಕೊರತೆಗಳೇನು? ಅವೈಜ್ಞಾನಿಕ ಕಾರ್ಯಾಚರಣೆಗಳ ಮೂಲಕ ಪಕ್ಷಿಗಳ ಸಂತತಿಗಳಿಗೆ ತೊಂದರೆಯಾಗಿದೆಯಾ? ಅಥವಾ ಅವುಗಳ ಸಂಖ್ಯೆ ಹೆಚ್ಚಾಗಿದೆಯಾ? ಪಕ್ಷಿಗಳಿಗೆ ಜನರಿಂದ ತೊಂದರೆಯಾಗುತ್ತಿದೆಯಾ? ಅಥವಾ ಪಕ್ಷಿಗಳ ಸಂತತಿ ಹೆಚ್ಚಾಗಲು ಏನೇನು ಕ್ರಮಕೈಗೊಳ್ಳಬೇಕು ಎಂಬುದನ್ನು ಅರಿತು ವರದಿ ಸಿದ್ಧಪಡಿಸುವ ಸಲುವಾಗಿ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲಾಗಿದೆ. ಅರಣ್ಯ ಇಲಾಖೆ ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಂಡಿದೆ. ಪಕ್ಷಿಗಳ ವಾಸಕ್ಕೆ ಚಿಕ್ಕ ಚಿಕ್ಕ ದ್ವೀಪಗಳನ್ನು ರಚಿಸಲಾಗಿದೆ ಎಂದವರು ತಿಳಿಸಿದರು.
ಇದನ್ನೂ ಓದಿ:ಸಚಿವ ಸ್ಥಾನ ಸಿಗದಿರುವ ಅಸಮಾಧಾನವಿದೆ, ಅನಿವಾರ್ಯತೆಯೂ ಇದೆ: ಪರಣ್ಣ ಮುನವಳ್ಳಿ
ಅಂಕಸಮುದ್ರ ಪಕ್ಷಿಧಾಮದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಎರಡು ದಿನಗಳ ಕಾಲ ಪಕ್ಷಿಗಳ ಸಮೀಕ್ಷಾ ಕಾರ್ಯ ಮಾಡಲಾಯಿತು. ಈ ಸಮೀಕ್ಷಾ ಕಾರ್ಯವನ್ನು ವರ್ಷದಲ್ಲಿ ಬೇಸಿಗೆ, ಮಳೆಗಾಲ, ಚಳಿಗಾಲ ಮೂರು ಬಾರಿ ಸಮೀಕ್ಷೆ ಮಾಡಬೇಕು. ಸ್ಥಳೀಯ ಪಕ್ಷಿಗಳಾವುವು, ಗೂಡು ಕಟ್ಟುವ ಪಕ್ಷಿಗಳಾವುವು, ವಲಸೆ ಪಕ್ಷಿಗಳಾವುವು, ಅಳವಿನ ಅಂಚಿನಲ್ಲಿರುವವು ಎಂಬುದನ್ನು ವೈಜ್ಞಾನಿಕವಾಗಿ ಅರಿಯಲು ಸಮೀಕ್ಷೆ ಮಾಡಬೇಕು. 120ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಕಂಡುಬಂದಿದ್ದು, ಇದರಲ್ಲಿ ವಿದೇಶದಲ್ಲಿ ಅಳವಿನ ಅಂಚಿನಲ್ಲಿರುವ ಪಕ್ಷಿಗಳು ಕಾಣಿಸಿಕೊಂಡಿವೆ. ಕೆರೆಯಲ್ಲೇ 11ಕ್ಕೂ ಹೆಚ್ಚಿನ ಜಾತಿಗಳು ಪತ್ತೆಯಾಗಿವೆ. ವರದಿ ಸಿದ್ಧಗೊಂಡ ಬಳಿಕ ಮುಂದಿನ ಕ್ರಮಕೈಗೊಳ್ಳಲು ಅನುಕೂಲವಾಗಲಿದೆ.
ವಿಜಯ್ ಇಟಿಗಿ, ಪಕ್ಷಿ ಪ್ರೇಮಿ, ಹಗರಿಬೊಮ್ಮನಹಳ್ಳಿ
ವೆಂಕೋಬಿ ಸಂಗನಕಲ್ಲು