ನವದೆಹಲಿ: ದೇಶಾದ್ಯಂತ ಕೋವಿಡ್ ಲಸಿಕೆಯ 2ನೇ ಹಂತದ ಅಭಿಯಾನ ಸೋಮವಾರ (ಮಾರ್ಚ್ 01) ಆರಂಭವಾದ ಹಿನ್ನೆಲೆಯಲ್ಲಿ ಕೊ-ವಿನ್ 2.0 ಪೋರ್ಟಲ್ ನಲ್ಲಿ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನದವರೆಗೆ ಒಂದು ಮಿಲಿಯನ್ (ಹತ್ತು ಲಕ್ಷಕ್ಕೂ) ಗೂ ಅಧಿಕ ಮಂದಿ ಹೆಸರನ್ನು ನೋಂದಾಯಿಸಿಕೊಂಡಿದ್ದು, ಲಸಿಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತಮಿಳುನಾಡು : ಬಾರಿ ಸುದ್ದಿ ಮಾಡುತ್ತಿದೆ ರಾಹುಲ್ ಗಾಂಧಿ ಪುಷ್ ಅಪ್ಸ್ ..!
ಕೋವಿಡ್ 19 ಸೋಂಕಿನ ಮೊದಲ ಹಂತದ ಲಸಿಕೆ ವಿತರಣೆ ಅಭಿಯಾನದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. 2ನೇ ಹಂತದ ಅಭಿಯಾನದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು.
2ನೇ ಹಂತದ ಲಸಿಕೆ ನೀಡಿಕೆ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಹಂತದ ಡೋಸ್ ಪಡೆದಿದ್ದು, ಹಲವು ಸಚಿವರು, ಶಾಸಕರು ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ.
ಪಂಜಾಬ್, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಚತ್ತೀಸ್ ಗಢ ಮತ್ತು ಮಧ್ಯಪ್ರದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚು ವರದಿಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಆಯುಷ್ಮಾನ್ ಭಾರತ್ ಅಡಿಯಲ್ಲಿ ಸುಮಾರು ಹತ್ತು ಸಾವಿರಕ್ಕಿಂತಲೂ ಅಧಿಕ ಖಾಸಗಿ ಆಸ್ಪತ್ರೆಗಳು, ಸಿಜಿಎಚ್ ಎಸ್ ನಡಿ 600ಕ್ಕೂ ಅಧಿಕ ಆಸ್ಪತ್ರೆಗಳು ಹಾಗೂ ಇತರ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ಯೋಜನೆಯಡಿ ಲಸಿಕೆ ವಿತರಣೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿರುವುದಾಗಿ ವರದಿ ವಿವರಿಸಿದೆ.