ಕೆ.ಆರ್.ಪುರ: ಕಲುಷಿತಗೊಂಡಿರುವ ಹೊರಮಾವು ಅಗರ ಕೆರೆ ಸ್ವಚ್ಚತೆಗೆ ಟೆಕ್ಕಿಗಳು ಮುಂದಾಗಿದ್ದಾರೆ. ಭಾನುವಾರ ಶ್ರಮದಾನ ಮತ್ತು ಸ್ವಂತ ಖರ್ಚಿನಿಂದ ಜೆಸಿಬಿ ಬಳಸಿ ಕೆರೆ ಸ್ವತ್ಛತೆ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲದೆ, ಕೆರೆಗೆ ತಂತಿಬೇಲಿ ಅಳವಡಿಸಿದರು.
ಸುತ್ತಮುತ್ತಲಿನ ಅರ್ಪಾಟ್‌ಮೆಂಟ್‌ನಿಂದ ಬಿಡುತ್ತಿರುವ ಕೊಳಚೆ ನೀರಿನಿಂದ ಹಾಗೂ ಘನತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಕೆರೆ ಕಲುಷಿತಗೊಂಡಿದೆ. ಅಲ್ಲದೆ, ಯಥೇಚ್ಚವಾಗಿ ಜೊಂಡು ಬೆಳೆದಿದೆ. ಕಣ್ಮರೆಯಾಗುತ್ತಿರುವ ಕೆರೆಗಳ ಪಟ್ಟಿಗೆ ಹೊರಮಾವು ಅಗರ ಕೆರೆಯೂ ಸೇರ್ಪಡೆಯಾಗುವ ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಕೆರೆ ಸಂರಕ್ಷಣೆಗೆ ಟೆಕ್ಕಿಗಳು ಮುಂದಾಗಿದ್ದಾರೆ. ಕೆರೆಗೆ ಹೊಸ ರೂಪ ನೀಡಲು ಸತತವಾಗಿ 6 ತಿಂಗಳಿಂದ ಶ್ರಮಿಸಿತ್ತಿರುವ ಟೆಕ್ಕಿಗಳು ಸ್ವಂತ ಹಣದಿಂದ ಜೆಸಿಬಿ ಮೂಲಕ ಕೆರೆಯಲ್ಲಿ ಬೆಳದಿರುವ ಜೊಂಡು ತೆರವುಗೊಳಿಸುತ್ತಿದ್ದಾರೆ. ತಂತಿಬೇಲಿ ಇಲ್ಲದ ಕಡೆ ಅನುಪಯುಕ್ತ ನೀರಿನ ಬಾಟಲಿಗಳಿಂದ ಸಿದ್ದಪಡಿಸಿದ ತಡೆಗೋಡೆ ನಿರ್ಮಿಸುತ್ತಿದ್ದಾರೆ.
ಕೆರೆ ಸುತ್ತಲೂ ತಂತಿಬೇಲಿಯನ್ನೂ ಅಳವಡಿಸುತ್ತಿದ್ದಾರೆ. ಈ ಮೂಲಕ ಕೆರೆ ಉಳಿಸಲು ಸಂಕಲ್ಪ ತೊಟ್ಟಿದ್ದಾರೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಕೆರೆ ಸ್ವಚ್ಚತೆ ಕಾರ್ಯವನ್ನು ಮಾಡುತ್ತಿದ್ದಾರೆ. “ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು.
ಅವನತಿಯತ್ತ ಸಾಗಿರುವ ನಗರದ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಮುಂದಿನ ಪೀಳಿಗೆಗೆ ಜಲಮೂಲಗಳನ್ನು ಉಳಿಸಬೇಕು. ಕೆರೆ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತಿಮುಖ್ಯ. ಕೆರೆಗೆ ಕಸ ಎಸೆಯುವುದನ್ನು ಜನ ನಿಲ್ಲಿಸಬೇಕು,’ ಎಂದು ಟೆಕ್ಕಿ ಸ್ವಾರಿತ್ ಮನವಿ ಮಾಡಿದರು.