ನವದೆಹಲಿ: ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣ ಟ್ವೀಟರ್ ಸಂಸ್ಥೆಯ ಮೇಲೆ ಭಾರೀ ಒತ್ತಡ ಹೇರಿತ್ತು ಎಂದು ಟ್ವೀಟರ್ ಮಾಜಿ ಸಿಇಒ, ಸಹ ಸಂಸ್ಥಾಪಕ ಜಾಕ್ ಡೋರ್ಸಿ ಆರೋಪಿಸಿದ್ದು, ಇದಕ್ಕೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Rozgar Mela: 70 ಸಾವಿರ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ
ಡೋರ್ಸಿ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ರಾಜೀವ್ ಚಂದ್ರಶೇಖರ್, ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಆರೋಪವಾಗಿದೆ. ಇದು ಟ್ವೀಟರ್ ಇತಿಹಾಸದ ಸಂಶಯಾಸ್ಪದ ಆರೋಪವನ್ನು ಹೊರಹಾಕುವ ಪ್ರಯತ್ನವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ರೈತರ ಪ್ರತಿಭಟನೆಯ ಸುದ್ದಿಯನ್ನು ಪ್ರಕಟಿಸುತ್ತಿರುವ ಟ್ವೀಟರ್ ಖಾತೆಗಳನ್ನು ಬ್ಲಾಕ್ ಮಾಡುವಂತೆ ಭಾರತ ಸರ್ಕಾರ ಹಲವು ಬಾರಿ ಮನವಿ ಮಾಡಿಕೊಂಡಿತ್ತು. ಅಷ್ಟೇ ಅಲ್ಲ ಒಂದು ವೇಳೆ ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಭಾರತದಲ್ಲಿನ ಟ್ವೀಟರ್ ಕಚೇರಿಯನ್ನು ಮುಚ್ಚಿಸುವುದಾಗಿ ಬೆದರಿಕೆಯೊಡ್ಡಿತ್ತು ಎಂದು ಜಾಕ್ ಡೋರ್ಸಿ ಬ್ರೇಕಿಂಗ್ ಪಾಯಿಂಟ್ಸ್ ಎಂಬ ಯೂಟ್ಯೂಬ್ ಚಾನೆಲ್ ಗೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು.
ರೈತರ ಪ್ರತಿಭಟನೆ ಕುರಿತು ಸರ್ಕಾರದ ವಿರುದ್ಧ ಟೀಕಿಸುತ್ತಿದ್ದ ಕೆಲವು ಪತ್ರಕರ್ತರ ಖಾತೆಗಳನ್ನು ಬ್ಲಾಕ್ ಮಾಡುವಂತೆ ಅಂದು ಕೇಂದ್ರ ಸರ್ಕಾರ ಒತ್ತಡ ಹೇರಿತ್ತು. ಅಷ್ಟೇ ಅಲ್ಲ ನಮ್ಮ ಮನವಿಯನ್ನು ಧಿಕ್ಕರಿಸಿದರೆ ನಿಮ್ಮ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆಸುವ ಹಾಗೂ ಟ್ವೀಟರ್ ಕಚೇರಿಯನ್ನು ಮುಚ್ಚಿಸುವುದಾಗಿ ತಿಳಿಸಿತ್ತು ಎಂಬ ಜಾಕ್ ಡೋರ್ಸಿ ಆರೋಪ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಆರೋಪ, ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ.
2021ರಲ್ಲಿ ಜಾಕ್ ಟ್ವೀಟರ್ ಸಿಇಒ ಹುದ್ದೆಯನ್ನು ತ್ಯಜಿಸಿದ್ದರು. ಭಾರತದಂತೆ ಟರ್ಕಿ ಹಾಗೂ ನೈಜೀರಿಯಾ ಸರ್ಕಾರ ಕೂಡಾ ಟ್ವೀಟರ್ ಮೇಲೆ ನಿರ್ಬಂಧ ವಿಧಿಸಿತ್ತು ಎಂದು ದೂರಿದ್ದು, ಜಾಕ್ ಹೇಳಿಕೆಯನ್ನು ಹಲವು ಕಾಂಗ್ರೆಸ್ ಮುಖಂಡರು ಟ್ವೀಟ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಜಾಕ್ ಡೋರ್ಸಿ ಆರೋಪಕ್ಕೆ ಭಾರತೀಯ ಜನತಾ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಟ್ವೀಟರ್ ಗೆ ಭಾರತೀಯ ಕಾನೂನನ್ನು, ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಆ ಕಾರಣಕ್ಕಾಗಿಯೇ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದೆ.