Advertisement

ಭೀಮಾ ಕೋರೆಗಾಂವ ಘಟನೆಗೆ ಆಕ್ರೋಶ

10:03 AM Jan 09, 2018 | Team Udayavani |

ಆಳಂದ: ಮಹಾರಾಷ್ಟ್ರದ ಭೀಮಾ ಕೋರೆಗಾಂವ ವಿಜಯೋತ್ಸವ ವೇಳೆ ನಡೆದ ಅಹಿತಕರ ಘಟನೆ, ದಲಿತರ ಮೇಲಿನ ಹಲ್ಲೆ ಮತ್ತು ವಿಜಯಪುರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ತನಿಖೆಗೆ ಒಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಲಿತ ಸಮನ್ವಯ ಸಮಿತಿ ಕರೆ ನೀಡಿದ್ದ ಆಳಂದ ಬಂದ್‌ ಸೋಮವಾರ ಸಂಪೂರ್ಣ ಯಶಸ್ವಿಯಾಯಿತು.

Advertisement

ಸಾರಿಗೆ ಸಂಚಾರ ಸೇರಿದಂತೆ ಬಹುತೇಕ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದರಿಂದ ಸಾರ್ವಜನಿಕರು ಪರದಾಡಿದರು. ಬೆಳಗ್ಗೆ ಹೆದ್ದಾರಿಯ ಹಳೆಯ ಚೆಕ್‌ ಪೋಸ್ಟ್‌, ಸಿದ್ಧಾರ್ಥ ವೃತ್ತ ಮತ್ತು ಶ್ರೀರಾಮ ಮಾರುಕಟ್ಟೆ ವೃತ್ತದಲ್ಲಿ ದಲಿತ ಮುಖಂಡರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 

ದಲಿತಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರ್‌ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದೊಳಗೆ ಬರುವ ಬಸ್‌ಗಳನ್ನು ಹೊರಗಡೆಯೇ ತಡೆಯಲಾಗಿತ್ತು. ಕಲಬುರಗಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಮಾರ್ಗದ ಬಸ್‌ಗಳ ಸ್ಥಗಿತಗೊಂಡಿತ್ತು. 

ಕೋರೆಗಾಂವ ಕೃತ್ಯಕ್ಕೆ ಖಂಡನೆ: ಭೀಮಾ ಕೋರೆಗಾಂವ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳು ಸೇರಿಕೊಂಡು ಅಂಬೇಡ್ಕರ ಅನುಯಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಕೃತ್ಯ ಖಂಡನೀಯ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಿರಂತರ ದೌರ್ಜನ್ಯ: ರಾಯಚೂರು, ವಿಜಯಪುರ, ಗದಗದಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ. ಮಂಗಳೂರಿನಲ್ಲಿ ರಶೀದ ಕೊಲೆ, ದಾವಣಗೆರೆಯಲ್ಲಿ ಮುಸ್ಲಿಂ ಯುವಕನ ಹತ್ಯೆ, ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಭಾವಚಿತ್ರಗಳಿಗೆ ಸಗಣಿ ಎರಚಿ, ಧುತ್ತರಗಾಂವ ಗ್ರಾಮದ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಮೂಲಕ ರಾಷ್ಟ್ರಪತಿಗಳಿಗೆ ಮನವಿ
ಸಲ್ಲಿಸಿದರು.

Advertisement

ಮುಖಂಡರಾದ ಸೂರ್ಯಕಾಂತ ನಿಂಬಾಳ, ಹಣಮಂತ ಯಳಸಂಗಿ, ದಿನೇಶ ಕಾಂಬಳೆ, ಹಣಮಂತ ಇಟ್ಟಗಾ, ದತ್ತಾತ್ರೇಯ ಇಕ್ಕಳಕಿ, ಪ್ರಕಾಶ ಮೂಲಭಾರತಿ, ಪ್ರಹ್ಲಾದ ಸಿಂಧೆ, ಸಿದ್ಧರಾಮ ಪ್ಯಾಟಿ, ಆನಂದ ಗಾಯಕವಾಡ, ಬಾಬುರಾವ ಅರುಣದೋಯ, ದತ್ತಪ್ಪ ಹೋನ್ನಳ್ಳಿ, ಮಲ್ಲಿಕಾರ್ಜುನ ಬೋಳಣಿ, ಸುನೀಲ ಹಿರೋಳಿಕರ, ಚನ್ನವೀರ ಕಾಳಕಿಂಗೆ, ದಯಾನಂದ ಶೇರಿಕರ, ಶಿವಪುತ್ರ ನಡಗೇರಿ, ಧರ್ಮ ಬಂಗರಗಾ, ಮಲ್ಲಿಕಾರ್ಜುನ ಕೃಷ್ಣಾ ಕಾಂಬಳೆ, ಗೌತಮ ಕಾಂಬಳೆ, ಸಂಜಯಕುಮಾರ ದೇವನೂರ, ಮನೋಜ ದೊಡ್ಡಿ, ಲಕ್ಷ್ಮಣ ಝಳಕಿ, ಗುಂಡಪ್ಪ ದೇವನೂರ, ಪ್ರವೀಣ ಸೇರಿದಂತೆ ವಿವಿಧ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು. 

ಶಾಲೆ-ಕಾಲೇಜು ನಡೆಯಲಿಲ್ಲ : ಬಂದ್‌ನಿಂದಾಗಿ ಶಾಲಾ-ಕಾಲೇಜುಗಳು ನಡೆಯಲಿಲ್ಲ. ಪೆಟ್ರೋಲ್‌ ಪಂಪ್‌, ಅಂಗಡಿಗಳು ಬಂದ್‌ ಆಗಿದ್ದವು. ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ವಾಹನಗಳ ಸಂಚಾರವೂ ಸ್ಥಗಿತಗೊಂಡಿತ್ತು. ಕೆಲ ಆಯಕಟ್ಟಿನ ರಸ್ತೆಗಳ ಮಧ್ಯೆ ಪ್ರತಿಭಟನಾಕಾರರು ರಸ್ತೆಗಳನ್ನು ಬಂದ್‌ ಮಾಡಿದ್ದರಿಂದ ವಾಹನ ಸವಾರರು ಸಂಚರಿಸಲಾಗದೆ ಪರದಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next