ವಾಡಿ: ಭಾರತ ಬಂದ್ ಬೆಂಬಲಿಸಿ ಹೋರಾಟಕ್ಕಿಳಿದ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯ ನೂರಾರು ಗುತ್ತಿಗೆ ಕಾರ್ಮಿಕರು, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಎಸಿಸಿ ಕಾರ್ಮಿಕ ಸಂಘ ಎಐಟಿಯುಸಿ ಚುನಾಯಿತ ಪದಾಧಿಕಾರಿಗಳ ನೇತೃತ್ವದಲ್ಲಿ ಕಂಪನಿಯ ಪವರ್ ಪ್ಲ್ಯಾಂಟ್ ಹಾಗೂ ಮುಖ್ಯ ದ್ವಾರದ ಎದುರು ಜಮಾಯಿಸಿದ್ದ ಕಾರ್ಮಿಕರು, ಸಿಮೆಂಟ್ ಪ್ಯಾಕಿಂಗ್ ಹೌಸ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕಾಯಂ ನೌಕರರು ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡಿದ್ದರೆ, ಯಾವೊಬ್ಬ ಗುತ್ತಿಗೆ ಕಾರ್ಮಿಕನೂ ಕಂಪನಿಯೊಳಗೆ ಪ್ರವೇಶಿಸದೇ ಒಗ್ಗಟ್ಟು ಪ್ರದರ್ಶಿಸಿದರು.
ಎಸಿಸಿ ವಿರುದ್ಧ ಘೋಷಣೆ ಕೂಗಿದ ಮಹಿಳಾ ಮತ್ತು ಪುರುಷ ಗುತ್ತಿಗೆ ಕಾರ್ಮಿಕರು, ತಿಂಗಳಲ್ಲಿ ಕೇವಲ ಎಂಟು ದಿವಸ ಮಾತ್ರ ನಮಗೆ ಕೆಲಸ ಕೊಡಲಾಗುತ್ತಿದೆ. ಉಳಿದ ದಿನಗಳಲ್ಲಿ ಕೆಲಸ ನೀಡದೆ ಹೊರಗೆ ತಳ್ಳಲಾಗುತ್ತಿದೆ. ಇದರಿಂದ ನಮಗೆ ಉದ್ಯೋಗದ ಅಭದ್ರತೆ ಕಾಡುತ್ತಿದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳು ಮತ್ತು ವೃದ್ಧ ತಂದೆ ತಾಯಿಯಂದಿರನ್ನು ಮನೆಯಲ್ಲಿ ಬಿಟ್ಟು ಬೆಳಗ್ಗೆ 6 ಗಂಟೆಗೆ ಕಂಪನಿ ಗೇಟ್ ಎದುರು ಹಾಜರಿರುತ್ತೇವೆ. ಕೆಲಸ ಕೊಡುವಂತೆ ಅಂಗಲಾಚುತ್ತೇವೆ. ಕಂಪನಿ ನಮ್ಮ ಗೋಳು ಕೇಳಿಸಿಕೊಳ್ಳುವುದಿಲ್ಲ. ಕ್ವಾರಿ ವಿಭಾಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ದಿನಕ್ಕೆ 370ರೂ., ಇತರ ವಿಭಾಗಗಳಲ್ಲಿನ ಮಹಿಳಾ ಕಾರ್ಮಿಕರಿಗೆ 411ರೂ. ನೀಡುವ ಮೂಲಕ ಕಂಪನಿಯವರು ವೇತನ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಮಹಿಳಾ ಕಾರ್ಮಿಕರು ದೂರಿದರು.
ತಿಂಗಳಿಗೆ ಕನಿಷ್ಟ 20 ಹಾಜರಿ ಕೆಲಸ ನೀಡಬೇಕು. ಕ್ಯಾಂಟಿನ್ ಕೆಲಸದಲ್ಲಿ ಕಿರುಕುಳ ತಪ್ಪಿಸಬೇಕು. ಆರೋಗ್ಯ ಸೌಲಭ್ಯ, ಕ್ಯಾಂಟಿನ್ ಊಟ ಮತ್ತು ಉಪಹಾರದ ವ್ಯವಸ್ಥೆಗಳನ್ನು ಕಂಪನಿ ವತಿಯಿಂದ ಉಚಿತವಾಗಿ ಮಾಡಬೇಕು. ಇಎಸ್‌ಐ-ಪಿಎಫ್ ಸೌಲಭ್ಯ ಒದಗಿಸಬೇಕು. ಗುತ್ತಿಗೆ ಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಲಾರಿಗಳ ಮೂಲಕ ಹೊರಗಿನಿಂದ ಕಚ್ಚಾ ವಸ್ತುವಾಗಲಿ ಅಥವಾ ಒಳಗಿನಿಂದ ಸಿಮೆಂಟ್ ವಾಹನಗಳಾಗಲಿ ಚಲಿಸದೆ ಸ್ಥಗಿತಗೊಂಡಿದ್ದರಿಂದ ಕಂಪನಿ ಆಡಳಿತ ಮಂಡಳಿಗೆ ಸಹಜವಾಗಿ ಹೋರಾಟದ ಬಿಸಿ ಮುಟ್ಟಿತು.
ಕಾರ್ಮಿಕ ಸಂಘದ ಮುಖಂಡರಾದ ರಮೇಶ ಕಾರಬಾರಿ, ಶಾಮಸನ್, ಮಹ್ಮದ್ ಮನ್ಸೂರ್ ಅಲಿ, ಮಹ್ಮದ್ ಫಯ್ನಾಜ್, ಪಿ.ಕ್ರಿಸ್ಟೋಫರ್, ತುಕಾರಾಮ ರಾಠೊಡ, ಗುತ್ತಿಗೆ ಕಾರ್ಮಿಕರ ಮುಖಂಡರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ಪಿಎಸ್‌ಐ ವಿಜಯಕುಮಾರ ಭಾವಗಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.