Advertisement

ಏತ ನೀರಾವರಿ ಕಲ್ಪಿಸದ್ದಕ್ಕೆ ಆಕ್ರೋಶ

10:40 AM Jan 30, 2019 | |

ಶಿರಾಳಕೊಪ್ಪ: ತಾಲೂಕಿನ ಏತ ನೀರಾವರಿಗೆ ಹಲವಾರು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಸ್ಪಂದಿಸದ ಚುನಾಯಿತ ಜನಪ್ರತಿನಿಧಿಗಳ ಬಗ್ಗೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಪುಟ್ಟನ ಗೌಡ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಮಂಗಳವಾರ ಸೊರಬ ರಸ್ತೆಯಿಂದ ಶಿರಾಳಕೊಪ್ಪದ ನಾಡಕಚೇರಿವರೆಗೆ ಬೃಹತ್‌ ರ್ಯಾಲಿ ಮೂಲಕ ಆಗಮಿಸಿ ನಂತರ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ತಾಲೂಕಿನ ಏತ ನೀರಾವರಿಗೆ ಹಣ ಮೀಸಲಿಡಬೇಕು. ತಕ್ಷಣವೇ ಏತ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.

ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಇಂದು ರೆಸಾರ್ಟ್‌ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಬರಗಾಲ ಬಂದಿದ್ದರೂ ತಾಲೂಕಿನ ಶಾಸಕರು ಸ್ಪಂದನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕಳೆದ 40 ವರ್ಷಗಳಿಂದ ತಾಲೂಕಿನ ಜನತೆ ಎಲ್ಲಾ ರೀತಿಯ ಅಧಿಕಾರ ನೀಡಿದ್ದರೂ ತಾಲೂಕಿನ ರೈತರ ಸಲುವಾಗಿ ನಿರಾವರಿ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ರೈತರ ಕೂಗು ಇವರಿಗೆ ಕೇಳಿಸುತ್ತದೆ. ಚುನಾವಣೆ ಮುಗಿದಾಗ ರೈತರ ಸಮಸ್ಯೆ ಕಾಣಿಸುವುದಿಲ್ಲ, ಮುಂಬರುವ ದಿನಗಳಲ್ಲಿ ಏತ ನಿರಾವರಿ ಯೋಜನೆ ಬಜೆಟ್‌ನಲ್ಲಿ ಮಂಡನೆಯಾಗದೇ ಹೋದಲ್ಲಿ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

Advertisement

85 ಲಕ್ಷ ರೂ. ನೀರಾವರಿ ಯೋಜನೆ ಮಂಜೂರಾಗಿದೆ ಎಂದು ಹೇಳುವ ಶಾಸಕರು ಎಲ್ಲಿ ಆಗಿದೆ ಎಂಬುದನ್ನು ತೋರಿಸಿಕೊಡಲಿ. ರೈತರ ಬೆಳೆಗಳಿಗೆ ದರ ನಿಗದಿ ಸರಿಯಾದ ರೀತಿಯಲ್ಲಿ ಮಾಡಲಿ ಎಂದು ಆಗ್ರಹಿಸಿದರು.

ಗೌರವ ಅಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಈಗ ನೀರಾವರಿಗೆ ಸಲ್ಲಿಸುತ್ತಿರುವ ಮನವಿ ಆರನೇ ಬಾರಿಯದು. ಪ್ರ. 8 ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಉಡುಗುಣಿ ತಾಳಗುಂದ ಹೋಬಳಿಗಳಿಗೆ ಹಣ ಮೀಸಲಿಡುತ್ತಾರೆ ಎಂಬ ಆಶಾ ಭಾವ ಹೊಂದಿದ್ದೇವೆ. ಸರ್ಕಾರ, ಪ್ರತಿಪಕ್ಷಗಳು ಕಣ್ಣಾಮುಚ್ಚಾಲೆ ಆಡುವುದು ಬಿಟ್ಟು ರೈತರ ಬಗ್ಗೆ ಕಾಳಜಿ ತೋರಿಸಲಿ. ಜನಪ್ರತಿನಿಧಿಗಳು ಸುಳ್ಳು ಹೇಳುವುದನ್ನು ಬಿಟ್ಟು ನೀರಾವರಿ ಯೋಜನೆ ಜಾರಿಗೆ ತರಲಿ ಎಂದು ಹೇಳಿದರು.

ರೈತಸಂಘದ ತಾಲೂಕು ಅಧ್ಯಕ್ಷ ರಾಜಣ್ಣ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಧಿಕಾರದ ಆಸೆಯಲ್ಲಿ ತಾಲೂಕಿನ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಬೇಡಿಕೆ ಇಡೇರದಿದ್ದರೆ ಮುಂದೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಗುಡುಗಿದರು. ನಂತರ ಉಪತಹಶೀಲ್ದಾರ್‌ ಆನಂದ ಗರಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಕೆ.ಜಿ. ಕೊಟ್ರೇಶ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಯೋಗಿ ಕೆಂಚಳ್ಳಿ, ನಗರ ಘಟಕದ ಅಧ್ಯಕ್ಷ ನವೀದ್‌, ಶಾಂತಪ್ಪ, ಮತ್ತು ಇನ್ನಿತರ ರೈತ ಸಂಘದ ಎಲ್ಲಾ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next