Advertisement

ವಿಟಿಯು ಪರೀಕ್ಷೆ ಅವ್ಯವಸ್ಥೆಗೆ ಆಕ್ರೋಶ

12:24 PM Aug 22, 2017 | Team Udayavani |

ಬೀದರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿನ ಪರೀಕ್ಷಾ ಅವ್ಯವಸ್ಥೆ ಖಂಡಿಸಿ ನಗರದಲ್ಲಿ ಸೋಮವಾರ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಎಐಡಿಎಸ್‌ಓ ನೇತೃತ್ವದಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಮಿತಿ ಸಂಚಾಲಕ ಹಣಮಂತ ಎಸ್‌.ಎಚ್‌., ಸಹ ಸಂಚಾಲಕರಾದ ಶಹಬಾಜ್‌ ಮತ್ತು ಮಹ್ಮದ್‌ ಆರೀಫ್‌ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿ ನಂತರ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ವಿವಿ 2016ರಲ್ಲಿ ನಡೆಸಿದ ಇಂಜಿನಿಯರಿಂಗ್‌ ಪರೀಕ್ಷೆಗಳ ಫಲಿತಾಂಶ ವಿಳಂಬವಾಗಿ ಪ್ರಕಟಿಸಿದ್ದರಿಂದ ತೀವ್ರ ತೊಂದರೆ ಆಗಿತ್ತು. ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿತ್ತು. ಅದರ ಫಲಿತಾಂಶ, ಮರು ಮೌಲ್ಯಮಾಪನದ ಫಲಿತಾಂಶ ಪರೀಕ್ಷೆಯ ಹಿಂದಿನ ದಿನ ರಾತ್ರಿ ಪ್ರಕಟಗೊಂಡಿತ್ತು. ಇದರೊಂದಿಗೆ ಕ್ರಾಷ್‌ ಸೆಮಿಸ್ಟರ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಂತೂ ಕೇವಲ 50 ದಿನಗಳ ಅಂತರದಲ್ಲಿ 20 ವಿಷಯಗಳ ಪರೀಕ್ಷೆ ಬರೆಯುವಂತಾಯಿತು. ಫಲಿತಾಂಶ ಪ್ರಕಟಣೆಯಲ್ಲಿನ ಈ ಅನಿಶ್ಚಿತತೆ ಹೆಚ್ಚಾಗಿ, ಹಲವರು ಅನುತ್ತೀರ್ಣ ಆಗುವುದಕ್ಕೂ ಕಾರಣವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ. 2015-16ರಿಂದ ವಿಟಿಯು ಸಿಬಿಸಿಎಸ್‌ ಮಾದರಿಯನ್ನು ಅಳವಡಿಸಲಾಗಿದ್ದು, ಈ ಮಾದರಿಯ ರಚನೆ ಹಿಂದಿನ ಎಲ್ಲಾ ಮಾದರಿಗಿಂತ ಭಿನ್ನವಾಗಿದೆ. 2010ರ ಮಾದರಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಒಂದು ಪಕ್ಷ ಮಂದಿನ ವರ್ಷಕ್ಕೆ ಅರ್ಹತೆ ಇಲ್ಲದೇ ತಡೆಹಿಡಿದಲ್ಲಿ ಅವರು ಕೋರ್ಸ್‌ನ ಉಳಿದ ವರ್ಷಗಳು ಹೊಸದೊಂದು ಮಾದರಿಯಲ್ಲಿ ಕಲಿಯಬೇಕಾಗುತ್ತದೆ. ಕೋರ್ಸ್‌ನ ಅರ್ಧ ಭಾಗವನ್ನು 2010ರ ಮಾದರಿಯಲ್ಲಿ ಮತ್ತು ಉಳಿದರ್ಧ ಭಾಗವನ್ನು ಸಿಬಿಸಿಎಸ್‌ ಮಾದರಿಯಲ್ಲಿ ಕಲಿಯುವುದು ಸಮಗ್ರ ಜ್ಞಾನಾರ್ಜನೆಗೆ ಅಡ್ಡಿಯಾಗಿದೆ ಎಂದು ತಿಳಿಸಲಾಗಿದೆ. 2010 ಮಾದರಿಯ ಅರ್ಹ ವಿದ್ಯಾರ್ಥಿಗಳಿಗೆ ಹಳೆ ಮಾದರಿಯಂತೆಯೇ ಬೋಧನೆ ವ್ಯವಸ್ಥೆ ಮಾಡಬೇಕೆಂದು ತಾವು ಕಾಲೇಜುಗಳಿಗೆ ನಿರ್ದೇಶನ ನೀಡಿದ್ದೀರಿ. ಆದರೆ, ಇದು ಆಗುತ್ತಿಲ್ಲ. ಇನ್ನೊಂದೆಡೆ ಸಿಬಿಸಿಎಸ್‌ನ ಆಗಾಧ ಪಠ್ಯಕ್ರಮವನ್ನು ಸೆಮಿಸ್ಟರ್‌ ಪದ್ಧತಿಯಲ್ಲಿ ಸಿಗುವ ಕಡಿಮೆ ಅವಧಿಯಲ್ಲಿ ಸಮಯಕ್ಕೆ ಪಠ್ಯ ಕ್ರಮವನ್ನು ಮುಗಿಸಲಾಗದೇ ಪ್ರಾಧ್ಯಾಪಕರು ಒದ್ದಾಡುತ್ತಿದ್ದಾರೆ. ಇದು ಫಲಿತಾಂಶದ ತೀವ್ರ ಇಳಿಕೆಗೆ ಕಾರಣವಾಗಿದೆ ಎಂದು ದೂರಲಾಗಿದೆ. ಹಾಗಾಗಿ 2010ರ ಸ್ಕೀಮ್‌ನ ವಿದ್ಯಾರ್ಥಿಗಳಿಗೆ ಇಯರ್‌ ಬ್ಯಾಕ್‌ ಮತ್ತು ಕ್ರಿಟಿಕಲ್‌ ಇಯರ್‌ ಬ್ಯಾಕ್‌ ವ್ಯವಸ್ಥೆ ತೆಗೆದು ಹಾಕಿ ಸಿಬಿಸಿಎಸ್‌
ವಿದ್ಯಾರ್ಥಿಗಳಿಗೆ ಪರೂಕ ಪರೀಕ್ಷೆ ನಡೆಸಬೇಕು. ಸಿಬಿಸಿಎಸ್‌ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಪ್ರಕಟಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next