Advertisement

ಪೂರ್ಣಾವಧಿ ಹಾಜರಿ ನೀಡದ್ದಕ್ಕೆ ಆಕ್ರೋಶ

05:02 PM May 24, 2017 | Team Udayavani |

ಚಿಂಚೋಳಿ: ತಾಲೂಕಿನ ಸಾಮಾಜಿಕ ವಲಯ ಅರಣ್ಯ ಇಲಾಖೆ, ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ (ಟ್ರಂಚ್‌ ವರ್ಕ್‌) ಒಡ್ಡು ನಿರ್ಮಾಣ ಮಾಡಿದ ಕೂಲಿಕಾರರಿಗೆ ಪೂರ್ಣಾವಧಿ ಹಾಜರಿ ಹಾಕದಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಪಟ್ಟಣದ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ತಾಲೂಕಿನ ರುಮ್ಮನಗೂಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅರಣ್ಯಪ್ರದೇಶದ ಗುಡ್ಡಗಾಡು ಸ್ಥಳದಲ್ಲಿ 446 ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿಯೋಜನೆ ಅಡಿಯಲ್ಲಿ ಟ್ರಂಚ್‌ ವರ್ಕ್‌ ಮಾಡಿದ್ದಾರೆ.

ಆದರೆ ಅರಣ್ಯಇಲಾಖೆ ಇಂಜಿನಿಯರ್‌ ರಾಜಶೇಖರ ಕೂಲಿಕಾರ್ಮಿಕರಿಗೆ 224 ರೂ. ವೇತನ ನೀಡದೆ ಕೇವಲ 112 ರೂ.ನೀಡಿ ವಂಚಿಸಿದ್ದಾರೆ. ಬಡ ಕೂಲಿಕಾರ್ಮಿಕರು ಬೇಸಿಗೆ ದಿನಗಳಲ್ಲಿ ಬಿಸಿಲಿನ ತಾಪದೊಂದಿಗೆ ತಮ್ಮ ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ್ದಾರೆ.ಆದರೆ ಅಧಿಕಾರಿಗಳು ಬಡವರ ಹಣ ದೋಚಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಶಾಸಕ ಡಾ|ಉಮೇಶ ಜಾಧವ್‌ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿಲ್ಲ. ಕುಂಚಾವರಂ ಅರಣ್ಯಪ್ರದೇಶದಲ್ಲಿ ಹಾಗೂ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ಕೊಡಿಸುವುದಾಗಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ದಬ್ಟಾಳಿಕೆಯನ್ನು ನಿಲ್ಲಿಸುತ್ತೇನೆಂದು ರೈತರಿಗೆ ಭರವಸೆ ನೀಡಿದ್ದರು. 

ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯಿಂದ ಅರಣ್ಯ ಹಕ್ಕು ಕಾಯಿದೆ ಕುರಿತು ಜಾಗೃತಿ ಮೂಡಿಸಿದ್ದರು.ಆದರೆ ರೈತರ ಹಿತ ಕಾಪಾಡುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಉದ್ಯೋಗ ಖಾತ್ರಿ ಯೋಜನೆ ನೋಡಲ್‌ ಅಧಿಕಾರಿ ಸಂತೋಷಕುಮಾರ ಯಾಚೆ ಮತ್ತು ಶರಣಬಸಪ್ಪ ಮಮಶೆಟ್ಟಿ ಮಧ್ಯೆ ಮಾತಿನ ಚಕಮಕಿ ನಡೆದಾಗ ಅರಣ್ಯ ಇಲಾಖೆ ಎದುರು ಬಿಗುವಿನ ವಾತಾವರಣ ಉಂಟಾಗಿತ್ತು.

Advertisement

ತಹಶೀಲ್ದಾರ ದಯಾನಂದ ಪಾಟೀಲ, ಸಬ್‌ ಇನ್ಸಪೆಕ್ಟರ್‌ ಶರಣಬಸಪ್ಪ ಕೋಡ್ಲಾ ಇಬ್ಬರನ್ನು ಸಮಾಧಾನಪಡಿಸಿದರು. ಉದ್ಯೋಗ ಖಾತ್ರಿ ಯೋಜನೆ ಅಡಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆಗೆ ಒಳಪಡಿಸುತ್ತೇನೆಂದು ತಾಲೂಕು ನೋಡಲ್‌ ಅಧಿಕಾರಿ ಸಂತೋಷಕುಮಾರ ಯಾಚೆ ಭರವಸೆ ನೀಡಿದಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ತಾಲೂಕು ಕಾರ್ಯದರ್ಶಿ ಸಿದ್ದಾರ್ಥ ಠಾಕೂರ, ತಾಲೂಕುಅಧ್ಯಕ್ಷ ದೇವೀಂದ್ರಪ್ಪ ಪಾಟೀಲ ಕೊರವಿ, ಜಾಫರ ಮಿರಿಯಾಣ,ತಾಲೂಕ ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ ಮಾತನಾಡಿದರು. ತಹಶೀಲ್ದಾರ ದಯಾನಂದ ಪಾಟೀಲ, ಉಪ ವಲಯ ಅರಣ್ಯಾಧಿಕಾರಿ ಸಂಜೀವ ಚವ್ಹಾಣ ಮನವಿ ಪತ್ರ ಸ್ವೀಕರಿಸಿದರು. ರುಮ್ಮನಗೂಡ, ಎಂಪಳ್ಳಿ,ರಟಕಲ್‌ ಗ್ರಾಮಗಳ ಕೂಲಿಕಾರ್ಮಿಕರು ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next