ದಾವಣಗೆರೆ: ಭಾರತೀಯ ಯೋಧರ ಶಿರಚ್ಛೇದನ ಮಾಡಿದ ಪಾಕಿಸ್ತಾನದ ಕುಕೃತ್ಯವನ್ನು ಹಿಂದು ಜಾಗರಣಾ ವೇದಿಕೆ ಪಾಕ್ ಧ್ವಜ ಸುಟ್ಟು ಹಾಕುವ ಮೂಲಕ ಖಂಡಿಸಿದೆ.
ಗುರುವಾರ ಸಂಜೆ ಜಯದೇವ ವೃತ್ತದಲ್ಲಿ ಜಮಾಯಿಸಿದ ವೇದಿಕೆ ಕಾರ್ಯಕರ್ತರು, ಪಾಕ್ ಸೈನಿಕರ ದುಷ್ಕೃತ್ಯಕ್ಕೆ ಬಲಿಯಾದ ಯೋಧರಾದ ಪರಮ್‌ಜಿತ್ ಸಿಂಗ್, ಪ್ರೇಮ್ ಸಾಗರ್‌ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪಾಕ್ ವಿರುದ್ಧ ಘೋಷಣೆ ಕೂಗಿ, ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿ, ಪಾಕಿಸ್ತಾನದ ದುಷ್ಕೃತ್ಯಕ್ಕೆ ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಪ್ರಾಂತ ಸಂಚಾಲಕ ಎಸ್.ಟಿ. ವೀರೇಶ್, ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುವ ಬುದ್ಧಿ ಇನ್ನೂ ಬಿಟ್ಟಿಲ್ಲ.
ಉಗ್ರವಾದಿಗಳ ಮೂಲಕ ದೇಶದ ಅಮಾಯಕರನ್ನು ಕೊಲ್ಲುವ ಜೊತೆಗೆ ಇದೀಗ ಸೈನಿಕರನ್ನು ಗುರಿಯಾಗಿಸಿಕೊಂಡು ಅಮಾನವೀಯ ರೀತಿಯಲ್ಲಿ ಹತ್ಯೆಗೈದಿರುವುದು ಅತ್ಯಂತ ಖಂಡನೀಯ ಎಂದರು.
ಪಾಕಿಸ್ತಾನದ ದುಷ್ಕೃತ್ಯಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರ ಕೊಡಬೇಕು. ಇದುವರೆಗೆ ಪಾಕಿಸ್ತಾನದ ಬಗ್ಗೆ ಇದ್ದ ಮೃದು ಧೋರಣೆ ಕೈ ಬಿಡಬೇಕು. ಪದೇ ಪದೇ ಕದನ ವಿರಾಮ ಉಲ್ಲಂಘಿ ಸುವ ಪಾಕಿಸ್ತಾನಿಯರಿಗೆ ತಕ್ಕ ಪಾಠ ಕಲಿಸಬೇಕು.
ಪ್ರಧಾನಿ ಮೋದಿಯವರು ತಕ್ಷಣ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ರಾಜನಹಳ್ಳಿ ಶಿವಕುಮಾರ್, ಸತೀಶ್ ಪೂಜಾರಿ, ರಾಕೇಶ್ ಜಾಧವ್, ಮಲ್ಲಿಕಾರ್ಜುನ್, ಮಂಜುನಾಥ, ಪಿ.ಸಿ. ಶ್ರೀನಿವಾಸ್ ಇತರರು ಈ ಸಂದರ್ಭದಲ್ಲಿದ್ದರು.