ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ರಾತ್ರೋರಾತ್ರಿ ಬಂಧಿಸಿರುವ ಜಿಲ್ಲಾಡಳಿತ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಡೀಸಿ ಬಳಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಾವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ವ್ಯಂಗ್ಯವಾಡಿದರು.
ಗೌರಿಬಿದನೂರಿನಲ್ಲಿ ಪವರ್ ಗ್ರೀಡ್‌ನವರು ರೈತರ ಭೂ ಸ್ವಾಧೀನಕ್ಕೆ ಅತಿ ಕಡಿಮೆ ಪರಿಹಾರ ನೀಡುತ್ತಿರುವುದನ್ನು ಖಂಡಿಸಿ ತಾಲೂಕು ಕಚೇರಿ ಎದುರು ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಬಂಧಿಸಿದಲ್ಲದೇ, ಅಸ್ವಸ್ಥಗೊಂಡಿದ್ದ ರೈತರನ್ನು ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದ ವೇಳೆ ಗುರುವಾರ ಆಸ್ಪತ್ರೆಗೆ ಆಗಮಿಸಿ ರೈತರ ಯೋಗಕ್ಷೇಮ ವಿಚಾರಿಸಿದ ಬಳಿಕ ಶ್ರೀ ರಾಮರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸೇರಿ ಕೊಂಡು ವಂಚನೆ ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿದ್ದಾರೆ. ಶಾಂತಿಯುತವಾಗಿ ಹೋರಾಡು ತ್ತಿದ್ದ ರೈತರನ್ನು ಬಂಧಿಸುವ ಅವಶ್ಯಕತೆ ಏನಿತ್ತು. ಅವರು ಏನಾದರೂ ಕಲ್ಲು ಹಾಕಿದರಾ? ಅಥವಾ ಶಾಂತಿ ಭಂಗ ತಂದಿದ್ದರಾ ಎಂದು ಪ್ರಶ್ನಿಸಿದರು. ರೈತರನ್ನು ಬಂಧಿಸಿದರೆ ರೈತರು ಹೆದರುತ್ತಾರೆಂದು ಜಿಲ್ಲಾಡಳಿತ ಭಾವಿಸಿದೆ. ಆದರೆ, ನಾವು ಯಾವುದಕ್ಕೂ ಹೆದರಲ್ಲ. ರೈತರ ಹೋರಾಟಕ್ಕೆ ಹೆದರಿ ಇವತ್ತು ಜಿಲ್ಲಾಡಳಿತ ಬಂಧಿಸಿ ವಿವಿಧ ತಾಲೂಕುಗಳಲ್ಲಿ ಇಟ್ಟಿದೆ ಎಂದು ದೂರಿದರು.
ಗಾಂಧಿ ಪುಣ್ಯ ದಿನದಂದೇ ಜಿಲ್ಲಾಡಳಿತ ರೈತರೊಂದಿಗೆ ಕ್ರೂರವಾಗಿ ವರ್ತಿಸಿದೆ. ರೈತರ ಪಾಳಿಗೆ ಇದು ಕರಾಳ ದಿನ ಎಂದು ಶ್ರೀರಾಮರೆಡ್ಡಿ, ಕೃಷಿ ಸಚಿವರ ಕ್ಷೇತ್ರ ದಲ್ಲಿಯೇ ರೈತರಿಗೆ ಅನ್ಯಾಯವಾದರೂ ಸಚಿವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೆಚ್ಚಿನ ಪರಿಹಾರ ಬೇಕಾದರೆ ಕೋರ್ಟ್ ಹೋಗ ಎನ್ನಲಿಕ್ಕೆ ಇವರು ಏಕೆ ಕೃಷಿ ಸಚಿವರು, ಅದರಲ್ಲೂ ಸಂಪುಟ ಸಚಿವರು ಆಗಿದ್ದಾರೆ ಎಂದು ಪ್ರಶ್ನಿಸಿದರು.
ರೈತರಿಗೆ ಅವೈಜ್ಞಾನಿ ಕವಾಗಿ ಬೆಲೆ ನಿಗದಿ ಯಾಗಿದೆ. ಇವರಿಗೆ ತಾಕತ್ತು ಇದ್ದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಹೆಚ್ಚಿನ ಪರಿಹಾರ ಕೊಡಿಸಲಿ. ಅದು ಬಿಟ್ಟು ರಾಜ ಕಾರಣ ಮಾಡಲು ಹೊರಟರೆ ರೈತರು ಸುಮ್ಮನೆ ಇರುವುದಿಲ್ಲ. ಸಚಿವರಿಗೆ ಮತ ಹಾಕಿದ ರೈತರೇ ಇಂದು ಧರಣಿ ನಡೆಸು ತ್ತಿದ್ದಾರೆ. ನಮಗೆ ರಾಜಕಾರಣ ಮಾಡಲು ಅಲ್ಲಿ ಹೋಗಿ ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು.
ಶಿಡ್ಲಘಟ್ಟದಲ್ಲಿ ಒಂದು ರೀತಿ ಪರಿಹಾರ, ಗೌರಿಬಿದನೂರು ತಾಲೂಕಿನಲ್ಲಿ ಒಂದು ರೀತಿ ಪರಿಹಾರ ಕೊಡಲಾಗುತ್ತಿದೆ. ಜಿಲ್ಲಾಧಿ ಕಾರಿಗಳಿಗೆ ಅಧಿಕಾರ ಇದ್ದರೂ ಅತ್ಯಂತ ಕಡಿಮೆ ಬೆಲೆ ನಿಗದಿಪಡಿಸಲು ಏನು ಕಾರಣ ಎಂದು ಪ್ರಶ್ನಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗುಡಿಬಂಡೆ ಜಯರಾಮರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಲಕ್ಷ್ಮೀನಾರಾಯಣರೆಡ್ಡಿ, ದಾಳಪ್ಪ ಇದ್ದರು
ಉಪವಾಸನಿರತ 20 ರೈತರು ಬಂಧನ: ಗೌರಿಬಿದನೂರು ತಾಲೂಕು ಕಚೇರಿ ಎದುರು ಬುಧವಾರ ರಾತ್ರಿ ಧರಣಿ ನಡೆಸುತ್ತಿದ್ದ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ. 7 ರೈತರನ್ನು ಜಿಲ್ಲಾಸ್ಪತ್ರೆಯಲ್ಲಿ, 11 ಮಂದಿಯನ್ನು ಗುಡಿಬಂಡೆ ಆಸ್ಪತ್ರೆಯಲ್ಲಿ, ಶಿಡ್ಲಘಟ್ಟದಲ್ಲಿ 9 ಮಂದಿ ರೈತರನ್ನು ಹಾಗೂ ಗೌರಿಬಿದನೂರಿನಲ್ಲಿ 3 ಮಂದಿ ರೈತರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈತರ ಪ್ರತಿಭಟನೆ ಬೆಂಬಲಿಸಿ ಹಾಗೂ ಬಂಧಿತ ರೈತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಗುರುವಾರ ಗೌರಿಬಿದನೂರು, ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕುಗಳಲ್ಲಿ ಪ್ರತಿಭಟನೆಗಳು ನಡೆದಿವೆ.