ದಾವಣಗೆರೆ: ಮಧ್ಯ ಪ್ರದೇಶದ ಮಂದದೌರ್‌ನಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಖಂಡಿಸಿ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಬಂಧನ ವಿರೋಧಿಸಿ, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪಾಲಿಕೆ ಆವಣರದಲ್ಲಿ ಪ್ರತಿಭಟನೆ ನಡೆಸಿದರು.
ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವಾರಾಜ್ ಸಿಂಗ್ ಚವ್ಹಾಣ್‌ರ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಬಿಜೆಪಿ, ಕೇಂದ್ರ ಸರ್ಕಾರ, ಮಧ್ಯ ಪ್ರದೇಶದ ಸಿಎಂ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಬಿಜೆಪಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.
ಇದರ ಜೊತೆಗೆ ರೈತರ ಪರ ದನಿ ಎತ್ತಿದ ನಮ್ಮ ಪಕ್ಷದ ಮುಖಂಡ ರಾಹುಲ್ ಗಾಂಧಿಯವರನ್ನು ಬಂಧಿಸಿರುವುದು ಆ ಪಕ್ಷದ ನಿಜವಾದ ಧ್ಯೇಯ ಏನು ಎಂಬುದು ಸಾರ್ವಜನಿಕರಿಗೆ ತಿಳಿದಂತಾಗಿದೆ ಎಂದರು. ಈ ಹಿಂದೆ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಾಗ ಸಹ ನಮ್ಮ ನೆರೆಯ ಹಾವೇರಿ ಜಿಲ್ಲೆಯಲ್ಲಿ ಗೊಬ್ಬರ ಕೇಳಿದ್ದ ರೈತರ ಮೇಲೆ ಗೋಲಿಬಾರ್ ಮಾಡಲಾಗಿತ್ತು.
ಇದೀಗ ಮಧ್ಯ ಪ್ರದೇಶದಲ್ಲಿ ಗೋಲಿಬಾರ್ ಮಾಡುವ ಮೂಲಕ ತಾನು ಸದಾ ರೈತ ವಿರೋಧಿ ಎಂಬುದನ್ನು ತೋರಿಸಿದೆ ಎಂದು ಅವರು ಹೇಳಿದರು. ಮಧ್ಯ ಪ್ರದೇಶ ಸರ್ಕಾರ ಕೂಡಲೇ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಬೇಕು. ಗಾಯಗೊಂಡ ರೈತರಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ನೀಡಬೇಕೆಂದು ಎಂದು ಅವರು ಆಗ್ರಹಿಸಿದರು.
ಮೇಯರ್ ಅನಿತಾಬಾಯಿ, ಉಪಮೇಯರ್ ಮಂಜುಳಮ್ಮ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಉಪಾಧ್ಯಕ್ಷ ಹಾಲಪ್ಪ, ಜಿಪಂ ಸದಸ್ಯ ಓಬಳೇಶಪ್ಪ, ಪಾಲಿಕೆ ಸದಸ್ಯರಾದ ಎಂ.ಹಾಲೇಶ್, ಲಿಂಗರಾಜ್, ಸುರೇಂದ್ರ ಮೊಯ್ಲಿ,
-ಮುಖಂಡರಾದ ಪಿ. ರಾಜಕುಮಾರ್, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಅಜ್ಜಂಪುರ ಶೆಟ್ರಾ ಮೃತ್ಯುಂಜಯ, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಎ.ನಾಗರಾಜ್, ಕೇರಂ ಗಣೇಶ್, ರೇವಣಸಿದ್ದಪ್ಪ, ಸೋಮಲಾಪುರ ಹನುಮಂತಪ್ಪ, ಮುಜಾಹಿದ್, ಅಕ್ರಮ್ ಬಾಷಾ ಪ್ರತಿಭಟನೆ ನೇತೃತ್ವ ವಹಿಸಿದ್ದರು.