ಕುಷ್ಟಗಿ: ತಾಲೂಕಿನ ಕಲಕೇರಿಯಲ್ಲಿರುವ ಏಕೈಕ ಗೋಶಾಲೆಗೆ ಕಳಪೆ ಗುಣಮಟ್ಟದ ಮೇವು ಪೂರೈಸುತ್ತಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಜ.4ರಂದು ಕಲಕೇರಿಯ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಗೋಶಾಲೆ ಆರಂಭಿಸಲಾಗಿದ್ದು, ಆರಂಭದಲ್ಲಿ ಪೂರೈಸಿದ ಭತ್ತದ ಹುಲ್ಲು, ಜೋಳದ ದಂಟು ಮೇವು ಬೆಳ್ಳಗೆ ಇತ್ತು.ಹೀಗಾಗಿ ಜಾನುವಾರುಗಳು ಈ ಮೇವನ್ನು ತಿನ್ನುತ್ತಿದ್ದವು. ಆದರೆ ಮೇವು ಪೂರೈಕೆ ಏಜೆನ್ಸಿಯವರು ಕಳುಹಿಸಿದ ಭತ್ತದ ಹುಲ್ಲಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಜಾನುವಾರುಗಳು ಮೂಸಿ ಸಹ ನೋಡುತ್ತಿಲ್ಲ. ಸೋಮವಾರ ಸದರಿ ಗೋಶಾಲೆಯಲ್ಲಿ ಮೇವು ಮುಗಿದಿದ್ದು, ಕೂಡಲೇ ಮೇವು ತರಿಸುವ ವ್ಯವಸ್ಥೆ ಮಾಡದ ಬಗ್ಗೆ ಜಾನುವಾರು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಬಣ್ಣಕ್ಕೆ ತಿರುಗಿದ್ದ ಭತ್ತದ ಹುಲ್ಲು ತಿಂದ ನಮ್ಮ ಎತ್ತಿಗೆ ರಕ್ತ ಕೀವಾಗಿದೆ. ಹೀಗಾಗಿ ಕೂಡಲೇ ಅಗತ್ಯ ಚಿಕಿತ್ಸೆ ಕೊಡಿಸಲಾಯಿತು. ಮೇವು ಪೂರೈಕೆದಾರರು, ಮೇವಿನ ತೂಕ ಹೆಚ್ಚಳ ಮಾಡಲು ನೀರು ಚಿಮುಕಿಸುತ್ತಿದ್ದು, ಸದ್ಯ ಕಟಾವಾದ ಮೇವಿನೊಂದಿಗೆ ಹಳೆಯ ಮೇವನ್ನು ಸೇರಿಸಲಾಗುತ್ತಿದ್ದು, ಜಾನುವಾರುಗಳು ಮೇವನ್ನು ತಿನ್ನದೇ ನಿಂತಿವೆ. ಮೇವು ಪೂರೈಕೆದಾರರು ಸದ್ಯ ಕಟಾವು ಮಾಡಿದ ತಾಜಾ ಮೇವನ್ನೇ ಪೂರೈಸುವ ವ್ಯವಸ್ಥೆ ಮಾಡಬೇಕೆಂದು ನಡುವಲಕೊಪ್ಪ ಗ್ರಾಮದ ತುಳಜಾ ನಾಯಕ, ಕಾಳಮ್ಮ, ದುರಗಪ್ಪ ಚೌವ್ಹಾಣ ಒತ್ತಾಯಿಸಿದ್ದಾರೆ.
ಜಾನುವಾರುಗಳು ಬಿಸಿಲಿಗೆ ನಿಲ್ಲುವುದರಿಂದ ಕಾಯಿಲೆ ಬರುವ ಅಪಾಯವಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ಇಲ್ಲಿನ ಜಾನುವಾರುಗಳಿಗೆ ಇನ್ನೊಂದು ಶೆಡ್ ಬೇಕೆಂದು ಪ್ರಸ್ತಾಪಿಸಿದ್ದರೂ ಅಗತ್ಯ ಕ್ರಮ ಕೈಗೊಂಡಿಲ್ಲ. ಇನ್ನೊಂದು ಶೆಡ್ ನಿರ್ಮಿಸಲು ನಿರ್ಮಿತಿ ಕೇಂದ್ರದವರಿಗೆ ಸೂಚಿಸಲಾಗಿದ್ದು, ಆದರೆ ನಿರ್ಮಿತಿಯವರು ಗೋಶಾಲೆಯತ್ತ ಮುಖ ಮಾಡಿಲ್ಲ. ಈ ಗೋಶಾಲೆಯಲ್ಲಿ ಕಾರ್ಯ ನಿರ್ವಹಿಸುವ ನಾಲ್ಕು ಜನರಿಗೆ ಎರಡು ತಿಂಗಳಾಗುತ್ತ ಬಂದರೂ ವೇತನ ಇಲ್ಲ. ಹೀಗಾದರೆ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ ಎನ್ನುವುದು ಕೆಲಸಗಾರರ ಅಳಲು.
ಕಳೆದ ವಾರ ಗೋಶಾಲೆಗೆ ಪೂರೈಸಿದ ಭತ್ತದ ಹುಲ್ಲು ಕಳಪೆಯಾಗಿದ್ದು ಹಳಸಿದ ಅನ್ನದಂತಾಗಿತ್ತು. ಜಾನುವಾರುಗಳು ಬೇಕು ಬೇಡ ಎನ್ನುವಂತೆ ತಿನ್ನುತ್ತಿದ್ದು, ಗೋಶಾಲೆಗೆ ಸೇರಿಸಿದಾಗಿನಿಂದ ಜಾನುವಾರುಗಳು ಸೊರಗುತ್ತಿವೆ. ಕಾಳವ್ವ ಚವ್ಹಾಣ ರೈತ ಮಹಿಳೆ ಗೋಶಾಲೆಯಲ್ಲಿ ಪ್ರತಿ ದನಕ್ಕೆ 8 ಕೆ.ಕಿ. ಕರುವಿಗೆ 4 ಕೆ.ಜಿಯಂತೆ ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ ಹೋಬಳಿಗೊಂದು ಗೋಶಾಲೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಗೋಶಾಲೆಗಳಿಗೆ ಕಾಕಂಬಿಯ ಬಿಲ್ಲೆ ಪೂರೈಸುವ ವ್ಯವಸ್ಥೆ ಇದ್ದು, ಜಾನುವಾರು ಕಾಕಂಬಿ ಬಿಲ್ಲೆ ನೆಕ್ಕುತ್ತಾ ಮೇವು ತಿನ್ನುತ್ತವೆ.
ಚನ್ನಬಸಪ್ಪ ಹಳ್ಳದ್, ಸಹಾಯಕ ನಿರ್ದೇಶಕ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕುಷ್ಟಗಿ.