Advertisement

ಪರಿಸರವಾದಿಗಳೊಂದಿಗೆ ಚರ್ಚಿಸಿದ್ದಕ್ಕೆ ಆಕ್ರೋಶ

06:00 AM Aug 25, 2018 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪರಿಶೀಲನೆಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪರಿಸರವಾದಿಗಳೊಂದಿಗೆ ಮಾತುಕತೆ ನಡೆಸಿ, ಅವರ ಮನವಿ ಸ್ವೀಕರಿಸಿದರು. ಇದು ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿ ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ, ಕೇಂದ್ರ ಸಚಿವೆ ಹಾಗೂ ಜನಪ್ರತಿನಿಧಿಗಳ ನಡುವೆ ವಾಗ್ವಾದ ನಡೆಯಿತು.

Advertisement

ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಚಿವರು, ಅಧಿಕಾರಿಗಳ ಸಭೆಗೂ ಮುನ್ನ ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ಕಾರ್ಯಪ್ಪ, ಮೇಜರ್‌ ಬಿದ್ದಂಡ ನಂದ, ಮೇಜರ್‌ ಓ.ಎಸ್‌.ಚಿಂಗಪ್ಪ ಸೇರಿ ಕೆಲವು ನಿವೃತ್ತ ಸೇನಾಧಿಕಾರಿಗಳು ಸಚಿವರನ್ನು ಭೇಟಿಯಾಗಲು ಬಂದರು. ಕೊಡಗಿನಲ್ಲಿ ಪರಿಸರ ಸಂರಕ್ಷಣೆಯಾಗಬೇಕು ಮತ್ತು ಪಶ್ಚಿಮಘಟ್ಟ ಉಳಿಸಲು ಡಾ| ಕಸ್ತೂರಿರಂಗನ್‌ ವರದಿ ಜಾರಿಯಾಗಬೇಕೆಂದು ವಾದಿಸುತ್ತಲೇ ಬಂದಿದ್ದ ಮಾಜಿ ಸೇನಾಧಿಕಾರಿಗಳು ಸಚಿವೆಯನ್ನು ಭೇಟಿ ಮಾಡಲು ಬಂದಿರುವುದನ್ನು ಗಮನಿಸಿದ ಸ್ಥಳೀಯ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ಇತರರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಆದರೂ, ಸಚಿವರು ಮಾಜಿ ಸೇನಾಧಿಕಾರಿಗಳೊಂದಿಗೆ ಕೊಡಗಿನ ಪರಿಸ್ಥಿತಿ ಬಗ್ಗೆ ಸುದೀರ್ಘ‌ವಾಗಿ ಮಾತುಕತೆ ನಡೆಸಲು ಮುಂದಾದರು. ಇದು ಜನಪ್ರತಿನಿಧಿಗಳನ್ನು ಮತ್ತಷ್ಟು ಕೆರಳಿಸಿತು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಕೂಡ ಸಚಿವರು ಈ ರೀತಿ ಅಧಿಕಾರಿಗಳ ಸಭೆ ಬಿಟ್ಟು ಡಾ| ಕಸ್ತೂರಿರಂಗನ್‌ ವರದಿ ಜಾರಿಯ ಪರವಾಗಿರುವವರೊಂದಿಗೆ ಮಾತುಕತೆ ನಡೆಸುತ್ತಿರುವುದರ ವಿರುದ್ಧ ತೀವ್ರ ಅತೃಪ್ತಿ ಹೊರ ಹಾಕಿದರು.

ಸಚಿವರು ತಕ್ಷಣ ಸಭೆಗೆ ಬರಬೇಕು. ಇಲ್ಲದಿದ್ದರೆ ಸಭಾತ್ಯಾಗ ಮಾಡುವುದಾಗಿ ಉಸ್ತುವಾರಿ ಸಚಿವರೂ ಸೇರಿ ಶಾಸಕರು ಪಟ್ಟು ಹಿಡಿದಾಗ ಸ್ಥಳದಲ್ಲಿದ್ದ ಸಂಸದ ಪ್ರತಾಪ್‌ ಸಿಂಹ ಗಲಿಬಿಲಿಗೊಳಗಾದರು. ಸಂಸದ ಪ್ರತಾಪ್‌ ಅವರು ಕೇಂದ್ರ ಸಚಿವರ ಬಳಿ ತೆರಳಿ, ಸಭೆಗೆ ತಡವಾಗುತ್ತಿದೆ, ಸಚಿವ, ಶಾಸಕರು ಕಾಯುತ್ತಿದ್ದಾರೆ ಎಂದಾಗ ನಿರ್ಮಲಾ ಸೀತಾರಾಮನ್‌ ರೇಗಿದರು. ತಾವು ಮಾಜಿ ಸೈನಿಕರೊಂದಿಗೆ ಮಾತನಾಡುತ್ತಿದ್ದು, ಕಾರ್ಯಾಚರಣೆಗೆ ಸೇನೆ ಜಿಲ್ಲೆಗೆ ಭೇಟಿ ನೀಡಿದ ಮೇಲೆ ಇವರೊಂದಿಗೂ ಚರ್ಚಿಸುವುದು ತಮ್ಮ ಕರ್ತವ್ಯ ಎಂದರು.

ನಿವೃತ್ತ ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅಲ್ಲಿಯೇ ಇದ್ದ ನಿವೃತ್ತ ಸೇನಾನಿಗಳ ಜತೆ ಚರ್ಚಿಸಲು ರಕ್ಷಣಾ ಸಚಿವರು ಮುಂದಾದರು. ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, “ಮೇಡಂ, ಅಧಿಕಾರಿಗಳು ಸಾಕಷ್ಟು ಹೊತ್ತಿನಿಂದ ಕಾಯುತ್ತಿದ್ದಾರೆ. ಮೊದಲು ಸಭೆ ನಡೆಸಿ’ ಎಂದು ಒತ್ತಾಯಪೂರ್ವಕವಾಗಿ ಹೇಳಿದರು. ಇದರಿಂದ ಸಿಟ್ಟಗೆದ್ದ ನಿರ್ಮಲಾ ಸೀತಾರಾಮನ್‌, “ನಾನು ನನ್ನ ಕಾರ್ಯಕ್ರಮ ಪಟ್ಟಿಯನುಸಾರ ಮುಂದುವರಿಯುತ್ತಿದ್ದೇನೆ. ನೀವು ಹೇಳುವ ಪ್ರಕಾರ ನಡೆಯಬೇಕೆಂದಿದ್ದರೆ ಹಾಗೇ ಮಾಡೋಣ’ ಎಂದರು. ಅಧಿಕಾರಿಗಳು ಪರಿಹಾರ ಕಾರ್ಯಾಚರಣೆ ಬಿಟ್ಟು ಸಭೆಗೆ ಯಾಕೆ ಬಂದರು ಎಂದೂ ಮರುಪ್ರಶ್ನಿಸಿದರು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ, “ನಿಮಗನ್ನಿಸಿದ್ದನ್ನು ನೀವು ಮಾಡಿ’ ಎಂದು ಸಿಟ್ಟಿನಿಂದಲೇ ಹೇಳಿದರು.

Advertisement

ಇದರಿಂದ ವಿಚಲಿತರಾದ ರಕ್ಷಣಾ ಸಚಿವೆ, “ನಾನು ಸೆಂಟ್ರಲ್‌ ಡಿಫೆನ್ಸ್‌ ಮಿನಿಸ್ಟರ್‌ ಇದ್ದೇನೆ, ನೀವು ಹೇಳಿದಂತೆ ಕೇಳಬೇಕೆಂದು ನೀವು ಬಯಸುತ್ತಿದ್ದೀರಿ. ಸರಿ.. ಹಾಗಿದ್ದರೆ ನಿಮ್ಮ ಇಚ್ಛೆಯಂತೆ ಸಭೆ ನಡೆಸೋಣ ಬನ್ನಿ’ ಎಂದು ಸ್ಥಳದಿಂದ ಹೊರಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಯೂ ಅಸಹನೆಯಿಂದಲೇ ಕೇಂದ್ರ ಸಚಿವರು ಜಿಲ್ಲಾಧಿಕಾರಿ ಶ್ರೀವಿದ್ಯಾ ಪ್ರದರ್ಶಿಸಿದ ಕೊಡಗು ಪ್ರಕೃತಿ ವಿಕೋಪದ ಪ್ರಾತ್ಯಕ್ಷಿಕೆ ಗಮನಿಸಿದರು. ಒಂದು ಹಂತದಲ್ಲಿ ಯಾರು ಸಭೆಯಲ್ಲಿ ಮಾತನಾಡುವುದು ಎಂಬ ಪ್ರಶ್ನೆ ಎದ್ದಾಗ, ಉಸ್ತುವಾರಿ ಸಚಿವರಿಗೆ ಇದನ್ನೆಲ್ಲಾ ನೀವು ಮಾತನಾಡಿಕೊಂಡು ನಿರ್ಧರಿಸಿ. ನಿಮ್ಮೊಳಗಿನ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಿ ಎಂದು ಗರಂ ಆಗಿಯೇ ಹೇಳಿದರು. ಅಧಿಕಾರಿಗಳ ಸಭೆಯಲ್ಲಿಯೂ ಹೆಚ್ಚು ಮಾತನಾಡಲಿಲ್ಲ. ತರಾತುರಿಯಿಂದಲೇ ಸಭೆಯನ್ನು ಮುಕ್ತಾಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next