Advertisement

ಕೆಲಸ ನೀಡದ ಪಿಡಿಒ ವಿರುದ್ಧ ಆಕ್ರೋಶ

08:40 PM Jul 03, 2021 | Team Udayavani |

ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡದ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬುಡಪನಹಳ್ಳಿ ಗ್ರಾಮಸ್ಥರು ಶುಕ್ರವಾರ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.

Advertisement

ಬುಡಪನಹಳ್ಳಿ ಗ್ರಾಪಂ ಎದುರು ಗುದ್ದಲಿ, ಪಿಕಾಸಿ ಹಿಡಿದು ಜಮಾಯಿಸಿದ ಮುನ್ನೂರಕ್ಕೂ ಹೆಚ್ಚು ಜನರು, ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬೆಳಗ್ಗೆ 11 ರಿಂದ ಮ.2 ಗಂಟೆ ವೆರೆಗೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ ಮೆಡ್ಲೆರಿ, ಕೋವಿಡ್‌ನಿಂದಾಗಿ ಗ್ರಾಮೀಣ ಭಾಗದ ಜನರು ಉದ್ಯೋಗ ಹಾಗೂ ದುಡಿಮೆಯಿಲ್ಲದೇ ಪರದಾಡುವಂತಾಗಿದೆ.

ಗ್ರಾಮೀಣ ಭಾಗದ ಜನರಿಗೆ ಸಂಜೀವಿನಿಯಾಗಬೇಕಿದ್ದ ನರೇಗಾ ಯೋಜನೆಯಡಿ ಬುಡಪನಹಳ್ಳಿ ಗ್ರಾಪಂ ಪಿಡಿಒ ಹಾಗೂ ಆಡಳಿತ ಮಂಡಳಿ ಉದ್ಯೋಗ ನೀಡದೇ ನಮ್ಮನ್ನು ಸತಾಯಿಸುತ್ತಿದ್ದಾರೆ. ಸರಕಾರ ಯೋಜನೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅರ್ಹರಿಗೆ ಸಿಗುತಿಲ್ಲ. ಇದರಿಂದಾಗಿ ನಮ್ಮ ಬದುಕು ಬೀದಿಗೆ ಬಂದು ನಿಂತಿದೆ. ಕೂಡಲೇ ನಮಗೆ ಉದ್ಯೋಗ ನೀಡುವಂತೆ ಆಗ್ರಹಿಸಿದರು.

ಕೆಂಚವ್ವ ಹಾವನೂರ ಮಾತನಾಡಿ, ಕಳೆದ ಜೂನ್‌ 2 ರಂದು ಸುಮಾರು 300ಕ್ಕೂ ಹೆಚ್ಚು ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಪಿಡಿಒಗೆ ಮನವಿ ಸಲ್ಲಿಸಿದ್ದೇವೆ. ಆದರೆ ಕೆಲಸವಿಲ್ಲ ಎಂದು ಸತಾಯಿಸುತ್ತ ಪಿಡಿಒ ಒಂದು ತಿಂಗಳಿನಿಂದ ನಮಗೆ ಕೆಲಸ ನೀಡಿಲ್ಲ ಎಂದು ಆರೋಪಿಸಿದರು. ಭರವಸೆ ನಂತರ ಪ್ರತಿಭಟನೆ ವಾಪಸ್‌: ಗ್ರಾಪಂ ಅಧ್ಯಕ್ಷೆ ಸಂಗೀತಾ ಹಿರೇಮಠ, ಉಪಾಧ್ಯಕ್ಷ ಹನುಮಂತಪ್ಪ ಸುಂಕಾಪುರ ಸೇರಿದಂತೆ ಗ್ರಾಪಂ ಅಧಿ ಕಾರಿಗಳು ಮುಂದಿನ 8 ದಿನಗಳ ಒಳಗೆ ಕೆಲಸ ಕೊಡುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್‌ ಪಡೆಯಲಾಯಿತು. ಈ ಸಂದರ್ಭದಲ್ಲಿ ರಮೇಶ ಸುಂಕದ, ಬೀರಪ್ಪ ಗೋಡೇರ, ಮೈಲಾರೆಪ್ಪ ಗೊರವರ, ಶಿಲ್ಪಾ ಬೇನಳ್ಳಿ, ಗುತ್ತೆವ್ವ ಮತ್ತೂರ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next