ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ದಿಢೀರನೇ ವಿದ್ಯುತ್ ದರ ಏರಿಕೆ ಮಾಡಿ ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ 1.50 ರೂ, ಕಡಿತಗೊಳಿಸಿರುವುದನ್ನು ಖಂಡಿಸಿ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ನೇತೃತ್ವದಲ್ಲಿ ವಿವಿಧ ಮೋರ್ಚಾಗಳ ನೂರಾರು ಕಾರ್ಯಕರ್ತರು ಜಮಾಯಿಸಿ ಚುನಾವಣೆಗೂ ಮೊದಲು ಘೋಷಿ ಸಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಷರತ್ತು ವಿಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಘೋಷಣೆ ಕೂಗಿದರು.
ವಿಳಂಬವೇಕೆ?: ಚುನಾವಣೆಗೂ ಮೊದಲು ಎಲ್ಲವನ್ನೂ ಉಚಿತವಾಗಿ ನೀಡುತ್ತೇವೆಂದು ಗ್ಯಾರಂಟಿ ನೀಡಿ ಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ಅಧಿಕಾರಕ್ಕೆ ಬಂದ ಬಳಿಕ ಜನತೆಗೆ ದೋಖಾ ಮಾಡುತ್ತಿದೆ. ಆ ಮೂಲಕ ನುಡಿದಂತೆ ನಡೆಯದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಇನ್ನಿಲ್ಲದ ಷರತ್ತು ಹಾಕುವ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ತೋರುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಟೀಕಿಸಿದರು.
ದರ ಏರಿಕೆ ಸರಿಯಲ್ಲ: ಕಾಂಗ್ರೆಸ್ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ಈಗ ಜನರಿಗೆ ಮೋಸ ಮಾಡುವ ಕೆಲಸದಲ್ಲಿ ತೊಡಗಿದೆ. ಜನರೇ ಇವರಿಗೆ ಪಾಠ ಕಲಿಸುತ್ತಾರೆ. ಒಂದು ಕಡೆ ಉಚಿತ ಕರೆಂಟ್ ಎಂದು ಹೇಳಿಕೊಂಡು ಮತ್ತೂಂ ದು ಕಡೆ ವಿದ್ಯುತ್ ದರ ಏರಿಕೆ ಮಾಡಿದೆ. ರೈತರಿಗೆ ನೀಡುತ್ತಿದ್ದ ದರದಲ್ಲಿಯೂ ಕಡಿತ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮಾಜಿ ಶಾಸಕ ಎಂ.ರಾಜಣ್ಣ, ವಿಭಾಗ ಸಂಘಟನಾ ಕಾರ್ಯದರ್ಶಿ ಕಾಂತರಾಜ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಅಗಲಗುರ್ಕಿ ಚಂದ್ರ ಶೇಖರ್, ತಾಪಂ ಮಾಜಿ ಅಧ್ಯಕ್ಷ ಮೋಹನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಆನಂದ್, ಜಿಲ್ಲಾ ಉಪಾಧ್ಯಕ್ಷ ಅಶೋಕ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಮಾಧ್ಯಮ ಪ್ರಮುಖ ಮಧುಚಂದ್ರ, ಕಚೇರಿ ಕಾರ್ಯದರ್ಶಿ ಲಕ್ಷ್ಮೀಪತಿ, ಎ.ವಿ.ಬೈರೇಗೌಡ, ನಾರಾಯಣರೆಡ್ಡಿ, ಸದಾಶಿವ, ವೆಂಕಟರವಣ, ಜಿಲ್ಲೆಯ ವಿವಿಧ ಮಂಡಲಗಳ ಅಧ್ಯಕ್ಷರು, ರಾಜ್ಯ-ಜಿಲ್ಲಾ ಪದಾಧಿಕಾರಿಗಳು, ಎಲ್ಲಾ ಮೋರ್ಚಾದ ಪದಾಧಿಕಾರಿಗಳು ಇದ್ದರು.
ಕಾಂಗ್ರೆಸ್ ವಿರುದ್ಧ ಸೀಕಲ್ಲು ರಾಮಚಂದ್ರಗೌಡ ಕಿಡಿ: ಕಾಂಗ್ರೆಸ್ ಕೊಟ್ಟ ಮಾತಿನಂತೆ ಯಾವುದೇ ಕಂಡೀಷನ್ ಹಾಕದೇ ರಾಜ್ಯದ ಜನತೆಗೆ ಚುನಾವಣಾ ಪೂರ್ವದಲ್ಲಿ ಕೊಟ್ಟಿರುವ 5 ಗ್ಯಾರಂಟಿ ಅನುಷ್ಠಾನಗೊಳಿಸಬೇಕು. ಅಧಿಕಾರ ವಹಿಸಿದ 24 ಗಂಟೆಯಲ್ಲಿ ಗ್ಯಾರಂಟಿ ಜಾರಿಗೆ ತರುತ್ತೇವೆಂದು ಸಿದ್ದರಾಮಯ್ಯನವರು ಇಷ್ಟೊಂದು ವಿಳಂಬ ತೋರುತ್ತಿರುವುದು ಏಕೆ ಎಂದು ಶಿಡ್ಲಘಟ್ಟದ ಸೀಕಲ್ಲು ರಾಮಚಂದ್ರಗೌಡ ಪ್ರಶ್ನಿಸಿದರು.