ಸಾಗರ: ನಿರಂತರ ವಿದ್ಯುತ್ ಪೂರೈಕೆ ಮಾಡದ ಮೆಸ್ಕಾಂ ಕ್ರಮವನ್ನು ಖಂಡಿಸಿ ಶುಕ್ರವಾರ ಮೆಸ್ಕಾಂ ಕಚೇರಿ ಎದುರು ಶಾಸಕ ಎಚ್. ಹಾಲಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ ಎಚ್. ಹಾಲಪ್ಪ, ಮೆಸ್ಕಾಂ ವಿದ್ಯುತ್ ನೀತಿಯಿಂದ ರೈತರು, ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ವಿದ್ಯುತ್ ಪೂರೈಕೆ ಮಾಡಲು ಮೆಸ್ಕಾಂ ಹಿಂದೇಟು ಹಾಕುತ್ತಿರುವುದು ಖಂಡನೀಯ.
ವಿಪರೀತ ಬೇಸಿಗೆ ಇರುವುದರಿಂದ ರೈತರು ಬೆಳೆದ ದೀರ್ಘಾವಧಿ ಬೆಳೆ ನೀರು ಪೂರೈಕೆ ಮಾಡಲಾಗದೆ ಬಿಸಿಲಿಗೆ ಸುಟ್ಟು ಹೋಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಕೇಳ್ಳೋಣವೆಂದರೆ ಯಾವೊಬ್ಬ ಅಭಿಯಂತರರು ಕರೆ ಸ್ವೀಕರಿಸುತ್ತಿಲ್ಲ. ನಿಮ್ಮ ಕೈನಲ್ಲಿ ಸಮರ್ಪಕ ಆಡಳಿತ ನಡೆಸದೆ ಹೋದರೆ ಮೆಸ್ಕಾಂ ಕಚೇರಿಗೆ ನಾವೇ ಬೀಗ ಹಾಕುತ್ತೇವೆ ಎಂದರು.
ಸಾಗರ ತಾಲೂಕು ಮಾತ್ರವಲ್ಲದೆ ಸೊರಬ ತಾಲೂಕಿನ ಆನವಟ್ಟಿ ಮತ್ತು ಹೊಸನಗರ ತಾಲೂಕುಗಳಲ್ಲೂ ವಿದ್ಯುತ್ ಸಮಸ್ಯೆ ಉಂಟಾಗಿದೆ. ಸರ್ಕಾರ ನಿಗದಿಪಡಿಸಿದಂತೆ ದಿನಕ್ಕೆ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿಲ್ಲ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಸೇರಿದಂತೆ ಎಲ್ಲ ಪರೀಕ್ಷೆಗಳು ನಡೆಯುತ್ತಿದೆ. ಪ್ರತಿವರ್ಷ ಮೆಸ್ಕಾಂ ಪರೀಕ್ಷಾ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಮಾಡಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಡವಾಡುತ್ತಿದೆ. ಅಧಿಕಾರಿಗಳಿಗೆ ಎಲ್ಲ ರೀತಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ತಿಳಿ ಹೇಳಲಾಗಿದೆ.
ಆದರೆ ಅವರಿಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಕಚೇರಿ ಎದುರು ಅನಿವಾರ್ಯವಾಗಿ ಪ್ರತಿಭಟನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ 8 ದಿನಗಳೊಳಗೆ ಗ್ರಾಮೀಣ ಪ್ರದೇಶಕ್ಕೆ ಕನಿಷ್ಟ 6 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಮಾಡುವ ಸಮಯವನ್ನು ಪತ್ರಿಕೆಗಳ ಮೂಲಕ ಪ್ರಚುರಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ಒಂದು ವಾರದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಪಂದಿಸುವ ಭರವಸೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಮೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ್, ಉಳ್ಳೂರು ಮತ್ತು ತ್ಯಾಗರ್ತಿ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಲಿಂಕ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾಮಗಾರಿ ವಿಳಂಬವಾಗಿದ್ದರಿಂದ ವಿದ್ಯುತ್‌ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ. ಹೊಸನಗರದ ಹರಿದ್ರಾವತಿಯಲ್ಲಿ 33 ಕೆ.ವಿ. ಹಾಗೂ ಕಾಗೋಡುದಿಂಬದಲ್ಲಿ 33 ಕೆವಿ ವಿದ್ಯುತ್ ಗ್ರಿಡ್ ಸ್ಥಾಪನೆಗೆ ಸರ್ಕಾರಕ್ಕೆ ಹಾಗೂ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಪ್ರಮುಖರಾದ ಚೇತನರಾಜ್ ಕಣ್ಣೂರು, ದೇವೇಂದ್ರಪ್ಪ, ಗಿರಿಜಾ ಶೆಟ್ಟಿ, ಲಲಿತಾ, ರೇವಪ್ಪ ಹೊಸಕೊಪ್ಪ, ರಾಜೇಂದ್ರ ಆವಿನಹಳ್ಳಿ, ಗುರುರಾಜ್ ಇನ್ನಿತರರು ಇದ್ದರು.