Advertisement
ವಿಕರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕೆಸಿಆರ್ ಈ ಹೇಳಿಕೆ ನೀಡಿದ್ದು, ರಾಜ್ಯ ಸರಕಾರ ಪ್ರತಿಕ್ರಿಯೆ ನೀಡಿಲ್ಲ. ಇದು ರಾಜಕೀಯ ದುರುದ್ದೇಶದ ಹೇಳಿಕೆ ಎಂದು ವಿಪಕ್ಷ ಕಾಂಗ್ರೆಸ್ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಾವುದೇ ಸಚಿವರು ಇದಕ್ಕೆ ಖಂಡನೆ ವ್ಯಕ್ತಪಡಿಸಿಲ್ಲ ಎಂದು ದೂರಿವೆ.
Related Articles
Advertisement
ಆಕ್ರೋಶ:
ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ರಾವ್ ರಾಜಕೀಯ ಪ್ರಚಾರಕ್ಕಾಗಿ ಈ ಹೇಳಿಕೆ ನೀಡಿದ್ದಾರೆ. ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ. ರಾವ್ ಹೇಳಿಕೆ ವಸ್ತುಸ್ಥಿತಿಯನ್ನು ಆಧರಿಸಿಲ್ಲ. ರಾಯಚೂರು ಭಾಗದ ಜನರು ಆ ರೀತಿ ಎಂದೂ ಹೇಳಿಲ್ಲ. ಕೆಸಿಆರ್ ಮಾತು ಶುದ್ಧ ಸುಳ್ಳು. ರಾಜಕೀಯ ಪ್ರೇರಿತವಾದ ಈ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ರಾಜಕಾರಣಿಗಳಿಗೆ ರಾಜ್ಯದ ಬಗ್ಗೆ ಅಭಿಮಾನವಿಲ್ಲ. ಈ ನೆಲ, ಜಲದ ಬಗ್ಗೆ ಕಾಳಜಿ ಇಲ್ಲ. ಬರೀ ಜಾತಿವಾರು, ಧರ್ಮವಾರು, ಕೋಮುವಾರು ಲೆಕ್ಕಚಾರದಲ್ಲೆ ಇದ್ದಾರೆ. ಅವರಿಗೆ ರಾಜ್ಯದ ಹಿತ ಬೇಕಾಗಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ದೂರಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿಗಳ ಹೇಳಿಕೆ ಖಂಡಿಸಬೇಕಾಗಿದ್ದ ಸರಕಾರ ಏಕೆ ಸುಮ್ಮನಿದೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಕರೆ ನೀಡಿದ ನಿಮ್ಮ ಪಕ್ಷದ ರಾಯಚೂರಿನ ಶಾಸಕ ಡಾ| ಶಿವರಾಜ್ ಪಾಟೀಲ್ ವಿರುದ್ಧ ಯಾವ ಕ್ರಮ ಕೈಗೊಂಡಿರಿ ಎಂದು ಪ್ರಶ್ನಿಸಿರುವ ಹೈದರಾಬಾದ್ -ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ| ರಝಾಕ್ ಉಸ್ತಾದ್, ಒಬ್ಬ ಶಾಸಕನ ಬೇಜವಾಬ್ದಾರಿಯ ಹೇಳಿಕೆಯಿಂದ ರಾಯಚೂರಿನ ಘನತೆಗೆ ಧಕ್ಕೆ ಉಂಟಾಗಿದೆ ಎಂದಿದ್ದಾರೆ.
ಐ.ಟಿ. ಕಂಪೆನಿಗಳಿಗೆ ಆಹ್ವಾನ ನೀಡಿದ್ದ ಸಚಿವ :
“ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ಬನ್ನಿ’ ಎಂದು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಕಳೆದ ಎಪ್ರಿಲ್‌ನಲ್ಲಿ ರಾಜ್ಯದಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಗೆ ಆಹ್ವಾನ ನೀಡಿದ್ದರು. “ಐಟಿ ಕಂಪೆನಿಗಳೇ ಬೆಂಗಳೂರಿನಿಂದ ಎಲ್ಲವನ್ನೂ ಪ್ಯಾಕ್ ಮಾಡಿ ಹೈದರಾಬಾದ್‌ಗೆ ಬನ್ನಿ. ಉತ್ತಮ ರೀತಿಯ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ’ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಇತರ ಮುಖಂಡರಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ವಿವಾದದ ಬಳಿಕ ಸ್ಪಷ್ಟನೆ ನೀಡಿದ್ದ ಪಾಟೀಲ್ :
ತೆಲಂಗಾಣಕ್ಕೆ ಸೇರ್ಪಡೆ ಹೇಳಿಕೆಯ ಬಗ್ಗೆ ರಾಯಚೂರು ಶಾಸಕ ಡಾ| ಶಿವರಾಜ್ ಪಾಟೀಲ್ ಅನೇಕ ಬಾರಿ ಸ್ಪಷ್ಟೀಕರಣ ನೀಡಿದ್ದಾರೆ. “ನಾನು ಆಡಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಜಿಲ್ಲೆಗೆ ಅನ್ಯಾಯವಾಗುತ್ತಿದ್ದು, ಸರಕಾರ ನಮ್ಮನ್ನು ಕಡೆಗಣಿಸಬಾರದು ಎಂಬ ಅರ್ಥದಲ್ಲಿ ಹಾಗೆ ಹೇಳಿದ್ದೆ. ಈ ಮಾತಿನಿಂದ ನೋವಾಗಿದ್ದರೆ ಜಿಲ್ಲೆಯ ಜನರ ಕ್ಷಮೆ ಯಾಚಿಸುವೆ ಎಂದಿದ್ದರು.
ಕೆ.ಸಿ. ರಾವ್ ಹೇಳಿದ್ದೇನು? :
ತೆಲಂಗಾಣ ಸರಕಾರ ಕೈಗೊಂಡಿರುವ ಕೆಲವು ಜನಪರ ಯೋಜನೆಯನ್ನು ನೋಡಿ ಕರ್ನಾಟಕದ ರಾಯಚೂರು ಜಿಲ್ಲೆಯ ಗಡಿಭಾಗದ ಜನ ನಮ್ಮನ್ನು ತೆಲಂಗಾಣದ ಜತೆ ವಿಲೀನ ಮಾಡಿ ಎಂದು ಹೇಳಿದ್ದರು.
ತೆಲಂಗಾಣ ಸಿಎಂ ಹೇಳಿಕೆ ಬಗ್ಗೆ ಮಾಹಿತಿ ಬಂದಿದೆ. ಅದರ ಬಗ್ಗೆ ಹೆಚ್ಚಿನ ವಿವರ ಪಡೆದು ಪ್ರತಿಕ್ರಿಯೆ ನೀಡುವೆ.-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ನೆರೆಯ ರಾಜ್ಯದ ಸಿಎಂ ಹೇಳಿಕೆಯನ್ನು ಮುಖ್ಯಮಂತ್ರಿ ಖಂಡಿಸಿಲ್ಲ. ಇದು ನಿಜಕ್ಕೂ ದುರದೃಷ್ಟಕರ.-ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಶಾಸಕ