Advertisement

ಜಲಜೀವನ್‌ ಮಿಷನ್‌ ವಿರುದ್ಧ ಆಕ್ರೋಶ

10:12 AM Feb 17, 2022 | Team Udayavani |

ವಾಡಿ: ಪ್ರತಿ ಮನೆಗೊಂದು ಕುಡಿಯುವ ನೀರಿನ ಕೊಳವೆ ಜೋಡಿಸಿ ಮೀಟರ್‌ ಅಳವಡಿಸಲು ಮುಂದಾದ ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಯೋಜನೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಕಮರವಾಡಿ ಗ್ರಾಪಂ ಆವರಣದಲ್ಲಿ ನಡೆಯಿತು.

Advertisement

ಯೋಜನೆ ಮಹತ್ವ ತಿಳಿಸಲು ಬಂದಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ಗ್ರಾಮ ಸಭೆಯಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಹೀಗಾಗಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ ನಡೆಯಿತು. ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ-ಮನೆಗೆ ಗಂಗೆ ಕಾರ್ಯಕ್ರಮದಲ್ಲಿ ಕಮರವಾಡಿ ಗ್ರಾಮ ಆಯ್ಕೆ ಮಾಡಿಕೊಂಡು ನಳ ಸಂಪರ್ಕದ ಜತೆಗೆ ಮೀಟರ್‌ ಅಳವಡಿಸುವ ಯೋಜನೆ ಸಾಕಾರಕ್ಕೆ ಪ್ರಯತ್ನಿಸಿ ಗ್ರಾಮಸ್ಥರ ವಿರೋಧ ಎದುರಿಸಿದ್ದ ಅಧಿಕಾರಿಗಳು, ಬುಧವಾರ ಗ್ರಾಪಂ ಆವರಣದಲ್ಲಿ ಗ್ರಾಮ ಸಭೆ ನಡೆಸಲು ಮುಂದಾಗುವ ಮೂಲಕ ಜನರಿಂದ ತೀವ್ರ ಪ್ರತಿರೋಧ ಎದುರಿಸಿದರು.

ಉಜ್ವಲ ಯೋಜನೆಯಡಿ ಬಡವರಿಗೆ ಉಚಿತ ಗ್ಯಾಸ್‌ ಕೊಡುವುದಾಗಿ ಹೇಳಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದೀರಿ. ದಿನದ 24 ತಾಸು ಉಚಿತವಾಗಿ ಶುದ್ಧ ಕುಡಿಯುವ ನೀರು ಕೊಡುತ್ತೇವೆ ಎಂದು ನಂಬಿಸಿ ನಳಗಳಿಗೆ ಮೀಟರ್‌ ಹಚ್ಚಲು ಬಂದಿದ್ದೀರಿ. ಮುಂದೊಂದು ದಿನ ಎಷ್ಟು ನೀರು ಪಡೆಯುತ್ತೇವೋ ಅಷ್ಟು ಹಣ ಕಟ್ಟಲು ರಸೀದಿ ಕೊಡುತ್ತೀರಿ. ಗ್ರಾಪಂ ವತಿಯಿಂದ ನಳ ಕಲ್ಪಿಸಿ. ಜಲಜೀವನ್‌ ಮಿಷನ್‌ ನಮ್ಮೂರಿಗೆ ಬೇಡವೇ ಬೇಡ ಎಂದು ಗ್ರಾಮಸ್ಥರು ಒಕ್ಕೂರಲಿಂದ ಘೋಷಣೆ ಕೂಗಿದರು.

ಈ ವೇಳೆ ಗ್ರಾಮಸ್ಥರಿಗೆ ಜಲಜೀವನ್‌ ಮಿಷನ್‌ ಮಹತ್ವ ಮತ್ತು ಅನುಕೂಲತೆ ವಿವರಿಸಲು ಮುಂದಾದ ಜಲಜೀವನ್‌ ಮಿಷನ್‌ ಯೋಜನೆ ಸಹಾಯಕ ನಿರ್ದೇಶಕ ಶಿವಾನಂದ ಪವಾರ, ಯೋಜನೆಯ ಟೀಂ ಲೀಡರ್‌ ಸಂತೋಷ ಮೂಲಗೆ ಅವರಿಗೆ ಸ್ಥಳೀಯರು ಪ್ರಶ್ನೆಗಳ ಸುರಿಮಳೆಗೈದರು.

ಅಧಿಕಾರಿಗಳೊಂದಿಗೆ ಚರ್ಚಿಸಿ ವಾದ ಮಂಡಿ ಸಿದ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ ಕೆಎಸ್‌) ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಶಿವುಕುಮಾರ ಆಂದೋಲಾ, ಎಐಯುಟಿಯುಸಿ ಜಿಲ್ಲಾ ಮುಖಂಡ ಭಾಗಣ್ಣ ಬುಕ್ಕಾ, ಯೋಜನೆಯ ಹಿಂದೆ ಅಡಗಿರುವ ಸರ್ಕಾರದ ಖಾಸಗೀಕರಣ ನೀತಿ ಮತ್ತು ವ್ಯಾಪಾರಿ ಮನೋಭಾವವನ್ನು ಬಯಲಿಗೆಳೆದರು.

Advertisement

ಕಲಬುರಗಿ ಮತ್ತು ಶಹಾಬಾದ ನಗರಗಳಲ್ಲಿ ನಳಗಳಿಗೆ ಮೀಟರ್‌ ಅಳವಡಿಸಿ ಸುಲಿಗೆ ಶುರುವಾಗಿದೆ. ಆದ್ದರಿಂದ ಯೋಜನೆ ತಿರಸ್ಕರಿಸೋಣ ಎಂದು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಪಿಡಿಒ ಭಾರತಿ ಮಣೂರ, ಜೆಇ ಶಿವಪುತ್ರ, ಮುಖಂಡರಾದ ಸೂರ್ಯಕಾಂತ ಶಿರವಾಳ, ಹಣಮಂತ ತಳವಾರ, ಭೀಮಾಶಂಕರ ಇಂದೂರ, ರಾಯಪ್ಪ ಕೊಟಗಾರ, ಬಸವರಾಜ ಸುಲೇಪೇಟ್‌, ಮಹ್ಮದ್‌ ಯ್ಯೂಸೂಪ್‌ ಮುಲ್ಲಾ, ದ್ಯಾವಣ್ಣ ತಳವಾರ, ಚಂದ್ರಪ್ಪ ಕೊಟಗಾರ, ಬಾಬುರಾವ್‌ ಅಣಿಕೇರಿ, ಮರೆಪ್ಪ ಮಾಂಗ್‌ ಹಾಗೂ ಮತ್ತಿತರರು ಇದ್ದರು.

ಗ್ರಾಮಸ್ಥರಲ್ಲಿ ಕ್ಷಮೆಯಾಚಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ

ಜಲಜೀವನ್‌ ಮಿಷನ್‌ ಯೋಜನೆಯ ಕುರಿತು ಪರ ವಿರೋಧ ಚರ್ಚೆ ನಡೆಸಲು ಪಂಚಾಯಿತಿ ಆವರಣದಲ್ಲಿ ಕರೆಯಲಾಗಿದ್ದ ಗ್ರಾಮ ಸಭೆಯಲ್ಲಿ ಯೋಜನೆ ವಿರೋಧಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಜಲಜೀವನ್‌ ಯೋಜನೆಯಡಿ ಮನೆಗಳಿಗೆ ನಳ ಸಂಪರ್ಕ ಮತ್ತು ನಳಗಳಿಗೆ ಮೀಟರ್‌ ಅಳವಡಿಕೆಗೆ ಅವಕಾಶ ನೀಡುವುದಿಲ್ಲ. ಪಂಚಾಯಿತಿಯಿಂದಲೇ ನಳ ಸಂಪರ್ಕ ಒದಗಿಸಿ, ಶುದ್ಧ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಸಭಾತ್ಯಾಗ ಮಾಡಿದರು. ಈ ವೇಳೆ ಗ್ರಾಪಂ ದ್ವಾರದ ಬಳಿ ತೆರಳಿದ ಪಿಡಿಒ ಭಾರತಿ ಮಣೂರೆ, ಪಂಚಾಯಿತಿ ಗೇಟ್‌ ಗೆ ಬೀಗ ಹಾಕಿ ಜನರು ಹೊರ ಹೋಗದಂತೆ ತಡೆದರು. ಅಧಿಕಾರಿಯ ವರ್ತನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆಗ ಪಿಡಿಒ ಸಭೆಯ ನಡಾವಳಿಗೆ ಸಹಿ ಹಾಕಬೇಕು. ಅದಕ್ಕಾಗಿ ಗೇಟ್‌ಗೆ ಬೀಗ ಹಾಕಿಸಿದ್ದೇನೆ. ಕ್ಷಮಿಸಿ ಎಂದು ಹೇಳಿದರು. ಆಗ ಪರಿಸ್ಥಿತಿ ತಿಳಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next