Advertisement

ಹಿಂದಿ ಹೇರಿಕೆ: ವ್ಯಾಪಕ ಖಂಡನೆ

07:57 PM Apr 28, 2022 | Team Udayavani |

ಬೆಂಗಳೂರು: ಹಿಂದಿ ರಾಷ್ಟ್ರೀಯ ಭಾಷೆ ವಿಚಾರ ಈಗ ಮತ್ತೂಮ್ಮೆ ಮುನ್ನೆಲೆಗೆ ಬಂದಿದ್ದು, ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಸರಣಿ ಟ್ವೀಟ್‌ಗಳ ಮೂಲಕ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸಂವಿಧಾನದಲ್ಲಿ ಹಿಂದಿ ಭಾಷೆಗೆ ನೀಡಿರುವ ಹೆಚ್ಚುಗಾರಿಕೆಯಿಂದಲೇ ಕೆಲವು ಹಿಂದಿ ಭಾಷಿಕರು ಹಿಂದಿಯೇತರ ಭಾಷಿಕರ ಮೇಲೆ ಯಜಮಾನಿಕೆ ತೋರುತ್ತಾರೆ. ಹಿಂದಿ ಚಿತ್ರನಟ ಅಜಯ್‌ ದೇವಗನ್‌ ಅವರ ಹೇಳಿಕೆ ಹಿಂದಿ ಪಟ್ಟಭದ್ರರ ಯಜಮಾನಿಕೆಯ ಪ್ರದರ್ಶನ. ಹಿಂದಿಗೆ ಪ್ರಾಮುಖ್ಯ ನೀಡುವ ಅಂಶಗಳನ್ನು ಸಂವಿಧಾನದಿಂದ ಕೈಬಿಡದ ಹೊರತು ಈ ಯಜಮಾನಿಕೆ ಪ್ರವೃತ್ತಿ ನಿಲ್ಲುವುದಿಲ್ಲ ಎಂದು  ಹೇಳಿದ್ದಾರೆ.

ಆಡಳಿತ, ವ್ಯವಹಾರ, ಉದ್ಯೋಗ, ಸಿನೆಮಾ ಹೀಗೆ ಭಾರತದ ಎಲ್ಲೆಡೆ ತಮಗೆ ಬೇರೆಯವರಿಗಿಂದ ಹೆಚ್ಚು ಪ್ರಾಮುಖ್ಯ ಸಿಗಬೇಕೆಂದು ಕೆಲವು ಹಿಂದಿ ಭಾಷಿಕರು ಅಪೇಕ್ಷಿಸುತ್ತಾರೆ, ಅವರ ಅಪೇಕ್ಷೆಯಂತೆ 70 ವರ್ಷದಿಂದಲೂ ಭಾರತ ಸರಕಾರ ನಡೆದುಕೊಂಡು ಬಂದಿದೆ. ಇವರು ಭಾಷಾ ಹೇರಿಕೆ ಮಾಡುತ್ತಾ ಅಸಮಾನ ಭಾರತವನ್ನು ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಪಿಡುಗು :

ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ರಕ್ಷಣ ವೇದಿಕೆ ಎರಡು ದಶಕಗಳ ಹಿಂದೆ ಹೋರಾಟ ಆರಂಭಿಸಿದಾಗ, ಹಿಂದಿ ಇದ್ದರೆ ಏನು ತಪ್ಪು ಎಂದು ಕೆಲವರು ಕೇಳಿದ್ದರು. ಈಗ ಎಲ್ಲರಿಗೂ ಹಿಂದಿ ಸಾಮ್ರಾಜ್ಯಶಾಹಿಯ ಸ್ವರೂಪ ಏನೆಂಬುದು ಅರ್ಥವಾಗಿದೆ. ಹಿಂದಿ ಹೇರಿಕೆ ಈಗ ಕೇವಲ ಸರಕಾರದ ಕೆಟ್ಟನೀತಿ ಮಾತ್ರವಲ್ಲ, ಒಂದು ಸಾಮಾಜಿಕ ಪಿಡುಗಾಗಿ ಬದಲಾಗಿದೆ ಎಂದು ಹೇಳಿದ್ದಾರೆ.

Advertisement

ಪ್ರವೀಣ್‌ ಶೆಟ್ಟಿ ಬಣದಿಂದ ಪ್ರತಿಭಟನೆ :

ಹಿಂದಿ ರಾಷ್ಟ್ರೀಯ ಭಾಷೆ ವಿಚಾರಕ್ಕೆ ಸಂಬಂಧಿಸಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಹೇಳಿಕೆ ಖಂಡಿಸಿ ಕರವೇ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರು ಗುರುವಾರ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.

ಹಿಂದಿ ಹೇರಿಕೆ ದಬ್ಟಾಳಿಕೆ ಸಂಸ್ಕೃತಿ :  

ಈ ಹಿಂದೆ ಬಜೆಟ್‌ ಭಾಷಣವನ್ನು ರಾಜ್ಯಪಾಲರು ಹಿಂದಿಯಲ್ಲಿ ಓದಿದ್ದಾರೆ. ಆಗ ಎಲ್ಲ ರಾಜಕೀಯ ಪಕ್ಷಗಳು ವಿರೋಧಿಸಬೇಕಾಗಿತ್ತು. ಆ ಕೆಲಸ ಮಾಡಲಿಲ್ಲ. ಈಗ ಕೇಂದ್ರ ಸರಕಾರವು ಬ್ಯಾಂಕ್‌ ಸಹಿತ ಎಲ್ಲ  ಕ್ಷೇತ್ರಗಳಲ್ಲಿ ಹಿಂದೆ ಹೇರಿಕೆಗೆ ಮುಂದಾಗಿದೆ. ಉತ್ತರ ಭಾರತದವರ ಹಿಂದೆ ಹೇರಿಕೆ ವಿಚಾರ ದಬ್ಟಾಳಿಕೆ ಸಂಸ್ಕೃತಿ ಆಗಿದೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಟೀಕಿಸಿದ್ದಾರೆ.

ಕನ್ನಡ ನಮಗೆ ತಾಯಿ. ಹೀಗಾಗಿ ಹಿಂದಿ ಸಹಿತ ಇನ್ನಿತರ ಭಾಷೆಗಳು ನಮಗೆ ಚಿಕ್ಕಮ್ಮ, ದೊಡ್ಡಮ್ಮ ಇದ್ದಂತೆ. ಯಾವುದೇ ಕಾರಣಕ್ಕೂ ನಮ್ಮ ತಾಯಿ ಭಾಷೆ ಬಿಟ್ಟು  ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಒಪ್ಪಲಾಗದು. ನಮಗೆ ಕನ್ನಡವೇ ರಾಷ್ಟ್ರಭಾಷೆ.-ಮಹೇಶ ಜೋಷಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next