Advertisement

ರಷ್ಯಾ ವಿರುದ್ಧ ಜಾರ್ಜಿಯನ್ನರ ಉಗ್ರ ಪ್ರತಿಭಟನೆ; 2008ರ ಗಾಯವನ್ನು ಮರೆಯದ ನೆರೆರಾಷ್ಟ್ರ

10:30 PM Feb 26, 2022 | Team Udayavani |

ನವದೆಹಲಿ: “ಶತ್ರುವಿನ ಶತ್ರು.. ಮಿತ್ರ’ ಎಂಬ ಪಂಚತಂತ್ರ ಕಥೆಯೊಂದರ ನೀತಿಯಂತೆ, ರಷ್ಯಾ ದಾಳಿಗೆ ಸಿಲುಕಿರುವ ಉಕ್ರೇನ್‌ ಪರವಾಗಿ ಜಾರ್ಜಿಯಾ ದೇಶದ ಜನತೆ ಒಗ್ಗೂಡಿದ್ದಾರೆ. ರಷ್ಯಾದ ದಾಳಿ ವಿರುದ್ಧ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲಾರಂಭಿಸಿದ್ದಾರೆ.

Advertisement

ಶುಕ್ರವಾರ ರಾತ್ರಿ, ರಾಜಧಾನಿ ಬಿಲಿಸಿಯ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜಾರ್ಜಿಯನ್ನರು, ತಮ್ಮಲ್ಲಿನ ಮೊಬೈಲ್‌ ಫೋನ್‌ಗಳ ಕ್ಯಾಮೆರಾ ಲೈಟ್‌ ಆನ್‌ ಮಾಡಿಕೊಂಡು ಗಾಳಿಯಲ್ಲಿ ತೂರಾಡಿಸುತ್ತಾ ತಮ್ಮ ಪ್ರತಿಭಟನಾ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದರು.

ರಷ್ಯಾ ವಿರುದ್ಧ ಯಾವುದೇ ಬಿಗಿ ಕ್ರಮಗಳನ್ನು ಕೈಗೊಳ್ಳದ ಜಾರ್ಜಿಯಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ಇರಾಕ್ಲಿ ಗ್ಯಾರಿಬಾಶ್ವಿ‌ಲಿ ಅವರ ರಾಜೀನಾಮೆಗೆ ಒತ್ತಾಯಿಸಿದರು.

2008ರಲ್ಲಿ ಜಾರ್ಜಿಯಾ ಮೇಲೆಯೂ ಪ್ರಹಾರ
ಜಾರ್ಜಿಯಾ ಜನರ ಈ ಆಗ್ರಹಕ್ಕೆ ಕಾರಣವೊಂದಿದೆ. 2008ರಲ್ಲಿ ಜಾರ್ಜಿಯ ಮೇಲೆ ರಷ್ಯಾದ ಅಧ್ಯಕ್ಷ ಪುಟಿನ್‌, ಸೇನಾ ದಾಳಿಗೆ ಆದೇಶ ಮಾಡಿದ್ದರು. ಅದರಂತೆ, ಯುದ್ಧ ಆರಂಭವಾಗಿತ್ತು. ಆದರೆ, ಆನಂತರ ದಿನಗಳಲ್ಲಿ ಶಾಂತಿ ಒಪ್ಪಂದ ಏರ್ಪಟಿದ್ದರಿಂದ ಜಾರ್ಜಿಯಾದಿಂದ ರಷ್ಯಾ ಪಡೆಗಳು ಹಿಂದಕ್ಕೆ ಸರಿದಿದ್ದವು. ಆದರೆ, ಅಲ್ಲಿನ ಜನಗಳ ಮನಸ್ಸಿಗೆ ಆಗಿರುವ ಯುದ್ಧದ ಗಾಯ ಮಾತ್ರ ಇನ್ನೂ ವಾಸಿಯಾಗಿಲ್ಲ. ಹಾಗಾಗಿಯೇ ಅವರು ಉಕ್ರೇನ್‌ ಪರವಾಗಿ ಬೀದಿಗಿಳಿದಿದ್ದಾರೆ.

ಇನ್ನು, ತಮ್ಮದೇ ಪ್ರಧಾನಿ ವಿರುದ್ಧ ಅವರಿಗೆ ಆಕ್ರೋಶ ಏಕೆ ಬಂದಿದೆಯೆಂದರೆ, ರಷ್ಯಾ ಸರ್ಕಾರ ಉಕ್ರೇನ್‌ ಮೇಲೆ ದಾಳಿ ನಡೆಸಿದ್ದನ್ನು ಜಾರ್ಜಿಯಾ ಪ್ರಧಾನಿ ಇರಾಕ್ಲಿ ಅವರು ತೀವ್ರವಾಗಿ ಖಂಡಿಸಿದರೂ, ಇತರ ಐರೋಪ್ಯ ರಾಷ್ಟ್ರಗಳು ಕೈಗೊಂಡಂತೆ ರಷ್ಯಾ ವಿರುದ್ಧ ಯಾವುದೇ ಆರ್ಥಿಕ ದಿಗ್ಬಂಧನ ನೀತಿ ಪ್ರಕಟಿಸಲಿಲ್ಲ. ಇದು ಜಾರ್ಜಿಯನ್ನರನ್ನು ಕೆರಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next