Advertisement

ಕೈ ಸೋಲಿಗೆ ಸಿದ್ದು  ಕಾರಣ : ಕೋಳಿವಾಡ

06:00 AM May 17, 2018 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌  ಸೋಲಿಗೆ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ, ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭೆ ಚುನಾವಣೆಗೆ ಹೋಗಬಾರದು  ಎಂದು ಆಗ್ರಹಿಸಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಬೇಕು. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದರು.

ಚಾಮುಂಡೇಶ್ವರಿಯಲ್ಲಿ  ಸೋತು, ಬಾದಾಮಿಯಲ್ಲಿ ಅಲ್ಪ ಅಂತರದಲ್ಲಿ ಗೆದ್ದ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು.  ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೆ ಸ್ವಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ವ್ಯಕ್ತಿ ಮುಂದೆಂದೂ ಅಧಿಕಾರದಲ್ಲಿ ಇರುವುದಿಲ್ಲ. ಕಾಂಗ್ರೆಸ್‌ ಪಕ್ಷ ಕೂಡ ಇಂತಹ ವ್ಯಕ್ತಿಗೆ ಅಧಿಕಾರವನ್ನು ಕೊಡಬಾರದು ಎಂದು ಹೇಳಿದರು.

ನಾನು ಅಪ್ಪಟ ಕಾಂಗ್ರೆಸಿಗ, ಸ್ಪೀಕರ್‌ ಆಗಿ ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕಾಂಗ್ರೆಸ್‌ನ ಈ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ. ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ನಿರ್ಧಾರಗಳ ಪರವಾಗಿ ನಾನು ನಿಲ್ಲುತ್ತಿದ್ದೆ. ಕಾಂಗ್ರೆಸ್‌ನ ರಕ್ತ ಸಿದ್ದರಾಮಯ್ಯ ಅವರಲ್ಲಿ ಇಲ್ಲ. ಈ ಹಿಂದಿನ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಸೋಲಲು ಸಿದ್ದರಾಮಯ್ಯ ಅವರು ಕುತಂತ್ರ ಮಾಡಿದ್ದರು. ಹಾಗೆಯೇ ಇನಾಂದಾರ್‌ ಹಾಗೂ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದು ನನ್ನ ಪರ ಪ್ರಚಾರಕ್ಕೆ ಬರಲಿಲ್ಲ
ಸಿದ್ದರಾಮಯ್ಯನವರು ನನ್ನ ಪರವಾಗಿ ಹೊಳೇ ನರಸೀಪುರ ಕ್ಷೇತ್ರಕ್ಕೆ ಕನಿಷ್ಠ 3 ಬಾರಿ ಪ್ರಚಾರಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರಚಾರಕ್ಕೆ ಬರಲಿಲ್ಲ. ಚುನಾವಣೆ ಪ್ರಕ್ರಿಯೆ ಆರಂಭವಾದ ಬಳಿಕ  ಹಾಸನ ಜಿಲ್ಲೆಯ ಯಾವ ಕ್ಷೇತ್ರಗಳಿಗೂ ಅವರು ಪ್ರಚಾರಕ್ಕೆ ಬರಲಿಲ್ಲ. ಏಕೆ ಬರಲಿಲ್ಲವೋ, ಏನು ಒಪ್ಪಂದವಾಗಿತ್ತೋ ಗೊತ್ತಿಲ್ಲ ಎಂದು ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಪರಾಜಿತ ಅಭ್ಯರ್ಥಿ ಬಾಗೂರು ಮಂಜೇಗೌಡ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next