ಹಲವು ವರ್ಷಗಳ ಹಿಂದಿನ ಸಂಗತಿ. ಕೆನಡಾದ ಮೊದಲ ತೀಕ್ಷ್ಣ ಚಳಿಗಾಲ ಎದುರಿಸಿದ್ದ ನಾನು ಇಲ್ಲಿಯ ಚೈತ್ರದ ಆಗಮನದ ನಿರೀಕ್ಷೆಯಲ್ಲಿದ್ದೆ. ಮೈನಸ್ ತಾಪಮಾನ ಮುಗಿದು ಇನ್ನೇನು ಉಷ್ಣತೆ ಏರುವುದರಲ್ಲಿತ್ತು. ಸುತ್ತಲಿನ ಹಿಮ ಕರಗಿ ಹುಲ್ಲುಹಾಸು ಗೋಚರಿಸ ತೊಡಗಿತ್ತು. ಮನೆಯ ಸುತ್ತ, ಶಾಲಾ-ಕಾಲೇಜುಗಳ ಮೈದಾನ, ನಡುದಾರಿಯ ಇಕ್ಕೆಲ, ನಮ್ಮಲ್ಲಿಯ ಸೇವಂತಿಗೆಯಂತೆ ಚಿಕ್ಕ ಚಿಕ್ಕ ಹಳದಿ ಹೂವು ಅರಳಿ ಸ್ವರ್ಗವನ್ನೇ ಸೃಷ್ಟಿಸಿತ್ತು.
ತಾಯ್ನಾಡಿನಿಂದ ದೂರಬಂದು ಚಳಿಗಾಲ ಎದುರಿಸಿದ್ದ ನನಗೆ ಈ ಹೂವಿನ ನೋಟ ಅತೀವ ಸಂತಸ ನೀಡಿತ್ತು. ಅದೆಷ್ಟೋ ಚಿತ್ರಗಳನ್ನು ಕ್ಲಿಕ್ಕಿಸಿದ್ದೆ. ಈ ಹೂವು ಅರಳಿದಾಗ ಭೂಮಿ ಹಸುರು ಹೊದ್ದಂತಿದೆ ಅನ್ನುವುದಕ್ಕಿಂತ ಭೂಮಿ ಹಳದಿ ಸೀರೆ ಉಟ್ಟಂತಿದೆ ಎನ್ನುವ ಭಾವನೆ ಮೂಡುತ್ತದೆ.
ಅದೆಷ್ಟೋ ಬಾರಿ ಮೈಲುದ್ದದ ದಾರಿಯಲ್ಲಿ ನಡೆಯುತ್ತ ಈ ಹೂಗಳನ್ನು ನೋಡಿ ನನ್ನಷ್ಟಕ್ಕೆ ನಾನು ಹಾಡಿಕೊಂಡಿದ್ದು ಇದೆ. “ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ’ ಎಂದು ಹಾಡುತ್ತ ಸಾಗುವಾಗೊಮ್ಮೆ ಅಪರಿಚಿತ ಮಹಿಳೆ ಮುಗಳ್ನಕ್ಕು ಮಾತಿಗೆಳೆದಳು. ಆ ನಳನಳಿಸುವ ಹೂವುಗಳನ್ನು ತೋರಿಸಿ, ಎಷ್ಟೊಂದು ಸುಂದರವಲ್ಲವೇ ಎಂದೆ. “ನೀನು ಇಲ್ಲಿ ಹೊಸಬಳಿರಬಹುದು. ನಿನಗೆ ಗೊತ್ತಿಲ್ಲ ಇದು ಒಂದು ತೆರನ ಉಪದ್ರವ’ ಅಂದಳು. ಆಕೆಗೆ ಸೌಂದರ್ಯ ಪ್ರಜ್ಞೆಯೆ ಇಲ್ಲ ಅಂದುಕೊಳ್ಳುತ್ತ ಮರು ಉತ್ತರಿಸದೇ ನಕ್ಕು ಮುಂದೆ ಸಾಗಿದೆ.
ಎಪ್ರಿಲ್ ತಿಂಗಳು ಮುಗಿಯುತ್ತ ಬಂದಂತೆ ನಮ್ಮ ಮನೆಯ ಎದುರಿನ ಹುಲ್ಲು ಹಾಸಿನಲ್ಲೂ ಈ ಹೂಗಳು ಅರಳಿ ನಿಂತವು. ಒಮ್ಮೆ ಪಕ್ಕದ ಮನೆಯಾತ ಮಾತನಾಡುತ್ತ, “ಈ ಹೂವು ಒಂದು ಜಾತಿಯ ಕಳೆ. ಕಳೆಯನ್ನು ಬೆಳೆಯ ಕೊಡದೆ ಆಗಾಗ ಬುಡ ಸಹಿತ ಕಿತ್ತು ತೆಗೆಯಬೇಕು. ಇದನ್ನು ಬೆಳೆಯ ಬಿಟ್ಟರೆ ಕೆಲವೆಡೆ ನೆರೆಹೊರೆಯವರು ದೂರು ಕೊಡಬಹುದು’ ಎಂದ. ಅಂದು ಆ ಮಹಿಳೆ “ಉಪದ್ರವ’ ಹೇಳಿದ್ದು ನೆನಪಾಯಿತು.
ಜನರೇಕೆ ಇದನ್ನು ದ್ವೇಷಿಸುತ್ತಾರೆ? ಕುತೂಹಲ ಕೆರಳಿತು. ಬೀಜಗಳು ಒಣಗಿ ಸುತ್ತಲೂ ಪಸರಿಸಿ ಇದು ಶರವೇಗದಲ್ಲಿ ದ್ವಿಗುಣಗೊಳ್ಳುತ್ತದೆ. ಹುಲ್ಲುಹಾಸಿನ ನಡುನಡುವೆ ಬೆಳೆದು ಕ್ರಮೇಣ ಇತರ ಗಿಡಗಳನ್ನು ಬೆಳೆಯಕೊಡದು. ಇವುಗಳ ಬೇರು ಅತೀ ಆಳಕ್ಕೆ ಇಳಿಯುವುದರಿಂದ ಸರಳವಾಗಿ ಕೈಯಿಂದ ಕಿತ್ತು ತೆಗೆಯಲು ಅಸಾಧ್ಯ. ಅದಕ್ಕೆ ಜನ ಇದನ್ನು ತಮ್ಮ ಮನೆಯಂಗಳದಲ್ಲಿ ಬೆಳೆಯಕೊಡರು.
ಡ್ಯಾಂಡೆಲೈನ್ ಇದರ ಹೆಸರು. ಎಸ್ಟರೇಸಿ ಎಂಬ ಸಸ್ಯ ಕುಟುಂಬದ ಸದಸ್ಯ. ಎಪ್ರಿಲ್‌ನಲ್ಲಿ ತಾಪಮಾನ ಕಡಿಮೆ ಇರುವುದರಿಂದ ನೆಲದ ಮಣ್ಣು ಇನ್ನೂ ಗಟ್ಟಿಯಿರುವುದರಿಂದ ಯಾವ ಸಸ್ಯಗಳೂ ಕಂಡು ಬರುವುದಿಲ್ಲ. ಅಂತಹ ಸಮಯದಲ್ಲಿ ಇವು ಚಿಗುರುತ್ತವೆ. ಆಗ ತಾನೆ ಚಳಿಗಾಲದ ನಿದ್ರಾವಸ್ಥೆಯಿಂದ ( ಹೈಬರ್ನೇಷನ್ ) ಎದ್ದ ಕೀಟಗಳಿಗೆ ಡ್ಯಾಂಡೆಲೈನ್ ಮೊದಲ ಆಹಾರ. ನಿಧಾನ ಈ ಸಸ್ಯದ ಕುರಿತು ಅರಿಯತೊಡಗಿದೆ. ಮನೆಯ ಹಿಂದಿನ ಪೊದೆಯಿಂದ ಎದ್ದ ನಾಲ್ಕಾರು ಕಾಡು ಮೊಲಗಳು ಇವುಗಳ ಎಲೆಯನ್ನೆಲ್ಲ ಒಂದೇ ದಿನ ತಿಂದು ಮುಗಿಸಿದವು. ಪಕ್ಕದ ಮನೆಯಿಂದ ನುಸುಳಿ ಬರುವ “ಗ್ರೌಂಡ ಹಾಗ್’ ಎಂಬ ಪ್ರಾಣಿಗೂ ಈ ಎಲೆಗಳು ಇಷ್ಟ. ಈ ಹಳದಿ ಹೂವುಗಳು ಒಣಗಿ ಬೀಜಗಳಾದಾಗ ಅವನ್ನು ಹೆಕ್ಕಲು ಗುಬ್ಬಿ ಸಮೂಹವೇ ಬಂದಿಳಿದಿತ್ತು. ನೆರೆಹೊರೆಯ ಮಕ್ಕಳು ಈ ಒಣಗಿದ ಹೂವನ್ನು ಹಾರಿಸುವುದನ್ನು ನೋಡಲು ಚೆಂದ.
ಮನೆಯಂಗಳದ ಹುಲ್ಲು ಹಾಸಿನ ನಡುವೆ ಎಲ್ಲೆಲ್ಲೂ ಬೆಳೆದು ನಿಂತ ಡ್ಯಾಂಡೆಲೈನ್ ಕತ್ತರಿಸಲು ಇಷ್ಟವಿರದಿದ್ದರೂ, ಬೆಳೆದು ನಿಂತ ಹುಲ್ಲನ್ನು ಕತ್ತರಿಸಿದಾಗ ಅವೂ ನೆಲಸಮವಾದವು. ಕೆನಡಾದಲ್ಲಿ ವರ್ಷದ ಆರು ತಿಂಗಳು ಚಳಿಯಿರುವುದರಿಂದ ಉಳಿದ ಆರು ತಿಂಗಳಲ್ಲಿ ಮರ-ಗಿಡಗಳೆಲ್ಲ ಚಿಗುರಿ ಹೂ-ಹಣ್ಣು-ಬೀಜ ಬಿಟ್ಟು ಎಲೆ ಉದುರಿಸಿ ಜೀವನ ಚಕ್ರ ಪೂರೈಸಬೇಕು. ಅದಕ್ಕೆ ಇರಬೇಕು ಕತ್ತರಿಸಿದ ಒಂದು ವಾರದಲ್ಲೇ ಮತ್ತೆ ನಳನಳಿಸತೊಡಗಿತು ಡ್ಯಾಂಡೆಲೈನ್.
ನನ್ನ ಇದರ ಪ್ರೀತಿಯನ್ನು ಕಂಡ ಪತಿರಾಯರು ಒಮ್ಮೆ, “ನಿನ್ನ ಡ್ಯಾಂಡೆಲೈನ್ ಎಲೆಗಳು ಅಂಗಡಿಯಲ್ಲಿ ಮಾರಾಟಕ್ಕಿದ್ದವು. ಮನುಷ್ಯರೂ ಇದನ್ನು ಸೇವಿಸುತ್ತಾರಂತೆ. ನೋಡು, ಇದರಿಂದ ಏನು ಮಾಡಲು ಸಾಧ್ಯ?,’ಎಂದರು. ಮರುದಿನವೇ ಊರಿನ ಗ್ರಂಥಾಲಯಕ್ಕೆ ಹೋಗಿ, ಡ್ಯಾಂಡೆಲೈನ್ ಬಗೆಗಿನ ಮಾಹಿತಿ ಬೇಕು ಎಂದು ಗ್ರಂಥಪಾಲಕರಿಗೆ ವಿನಂತಿಸಿದೆ. ಹಲವು ಸಂಗತಿ ಮುಂದಿಟ್ಟರು.
ಇದೊಂದು ಅದ್ಭುತ ಸಸ್ಯ. ಹಲವು ರೋಗಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದರ ಎಲೆ-ಹೂವು-ಬೇರು ಹೀಗೆ ಸಸ್ಯದ ಎಲ್ಲ ಭಾಗವೂ ಬಹು ಉಪಯೋಗಿ. ಈ ಹಳದಿ ಹೂವನ್ನು ಜನ ನೀರಿನಲ್ಲಿ ಕುದಿಸಿ ಚಹದಂತೆ ಸೇವಿಸುತ್ತಾರೆ. ಹೂವಿನ ಜಾಮ್ ಕೂಡ ಹಲವರಿಗೆ ಇಷ್ಟ. ಎಲೆಗಳನ್ನು ಸಲಾಡ್, ಪ್ಯಾನ್ ಕೇಕ್, ಸೂಪ್, ಬ್ರೆಡ್‌ನಲ್ಲೂ ಬಳಸುತ್ತಾರೆ.
ಮನೆಗೆ ಬಂದು ತೋಟದ ಹತ್ತಾರು ಎಲೆಗಳನ್ನು ಕೊಯ್ದು ತಂದು ಉಪ್ಪು-ಹುಳಿ-ಖಾರ ಹಾಕಿ ನಮ್ಮ ನಾಲಿಗೆ ರುಚಿಗೆ ಸರಿಹೊಂದುವ ಒಂದು ಅಡುಗೆ ತಯಾರಿಸಿದೆ. ಸಂಪೂರ್ಣ ಒರ್ಗಾನಿಕ್ ಎಂದು ಬೀಗಿದೆ. ಎಲ್ಲರಿಗೂ ಇಷ್ಟವಾಯಿತು. ಮಗದೊಂದು ದಿನ ಇನ್ನೊಂದು ಖಾದ್ಯ. ಎಲ್ಲಕ್ಕೂ ಸಮ್ಮತಿ ದೊರೆಯುತ್ತ ಹೋಯಿತು. ಇದೀಗ ನಾನಿರುವಲ್ಲಿ ಚೈತ್ರ ಶುರುವಾಗಿದೆ. ಅದೇ ಚುಮುಚುಮು ಚಳಿ. ಮತ್ತೆ ಬಂದಿದೆ – ಡ್ಯಾಂಡೆಲೈನ್. “ಕಳೆ ಸಸ್ಯ’ ಎಂಬ ಪುಕಾರಿಲ್ಲದೇ ಮನೆಯ ಹಿಂದಿನ ಮೊಲ, ಗ್ರೌಂಡ ಹಾಗ್ ಮತ್ತು ಗುಬ್ಬಿ ಸಮೂಹಕ್ಕೆಂದೇ ಹಿಂದೋಟದಲ್ಲಿ ಈ ಸುಂದರ ಸಸ್ಯವನ್ನು ಬೆಳೆಯಬಿಟ್ಟಿದ್ದೇನೆ.
*
ಸಹನಾ ಹರೇಕೃಷ್ಣ, ಟೊಂರಂಟೋ