ಮೈಸೂರು: ಭಾರತೀಯ ಸಂವಿಧಾನವು ಮುಂಬರುವ ದಿನಗಳಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನಗಳಲ್ಲಿ ಅಗ್ರಸ್ಥಾನ ಪಡೆಯಲಿದೆ ಎಂದು ಕಾನೂನು ತಜ್ಞ ಪ್ರೊ.ಸಿ.ಕೆ.ಎನ್.ರಾಜ ಹೇಳಿದರು. ಮೈಸೂರು ವಕೀಲರ ಸಂಘ ಏರ್ಪಡಿಸಿದ್ದ ಭಾರತೀಯ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.
1949ರ ನ.26 ರಂದು ಶ್ರೇಷ್ಠ ಗ್ರಂಥ ಸಂವಿಧಾನ ಅಂಗೀಕಾರವಾದ ದಿವಸ. ಇಂತಹ ದಿವಸವನ್ನು ಒಂದು ದಿನಕ್ಕೆ ಸೀಮಿತ ಮಾಡದೇ ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಜೊತೆಗೆ ಸಂವಿಧಾನ ಮಹೋತ್ಸವ ಎಂದು ತಿಂಗಳು ಪೂರ್ತಿ ಎಲ್ಲರಿಗೂ ಸಂವಿಧಾನದ ಅರಿವು ಮೂಡಿಸುವ ಮೂಲಕ ಆಚರಿಸಬೇಕು ಎಂದರು.
ಸಂವಿಧಾನ ರೂಪಿಸಿದ ಕೀರ್ತಿ ಅಂಬೇಡ್ಕರ್‌ಗೆ ಸಲ್ಲುತ್ತೆ: ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಎಂಬ ಮಹಾನ್ ಜ್ಞಾನಿ ಕರಡು ಸಮಿತಿ ಅಧ್ಯಕ್ಷರಾಗಿದ್ದು ನಮ್ಮೆಲ್ಲರ ಭಾಗ್ಯ. ನಾನಾ ದೇಶಗಳ ಸಂವಿಧಾನ ಓದಿ ಅಲ್ಲಿನ ಮುಖ್ಯ ಭಾಗಗಳನ್ನು ಆಯ್ದು ಭಾರತದ ಸಮಾನತೆಯ ಮೇಲೆ ಯಾವ ರೀತಿಯ ಸಂವಿಧಾನ ರೂಪಿಸಬಹುದು ಎಂಬುದನ್ನು ಅರಿತು ಸಂವಿಧಾನ ರೂಪಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮಹಾತ್ಮರ ಆದರ್ಶ ಪಾಲಿಸಿ: ಸಂವಿಧಾನ ಮಂಡಿಸುವ ಸಂದರ್ಭದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕುರಿತು ಹಲವಾರು ವಾಗ್ಮಿಗಳು ವಿರೋಧ ವ್ಯಕ್ತ ಪಡಿಸಿದರು. ಅವರಿಗೆಲ್ಲಾ ಅಂಬೇಡ್ಕರ್ ಅವರು ಸಭೆಯಲ್ಲಿ ಪ್ರತ್ಯುತ್ತರ ನೀಡುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುವ ಮೂಲಕ ದೇಶದ ಸಾಮಾನ್ಯ ಜನರಿಗೆ ಶಕ್ತಿ ತುಂಬಿದರು. ಇಂತಹ ಮಹಾನ್ ವ್ಯಕ್ತಿಯನ್ನು ನಾವು ಸದಾ ನೆನಪಿಸಿಕೊಳ್ಳಬೇಕು ಹಾಗೂ ಅವರ ಆದರ್ಶ ಪಾಲನೆ ಮಾಡಬೇಕು ಎಂದು ಹೇಳಿದರು.
ಸಂವಿಧಾನ ಪಾಲನೆ ಮಾಡಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ ಒಂಟಿಗೋಡಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರಮದಿಂದ ನಮ್ಮ ದೇಶದಲ್ಲಿ ಅತ್ಯಂತ ಉತ್ತಮ ಸಂವಿಧಾನ ರಚನೆಯಾಗಿದೆ. ಕಾನೂನು ಅಧ್ಯಯನದಲ್ಲಿ ಸಂವಿಧಾನ ವಿಷಯ ಪ್ರಮುಖವಾಗಿದ್ದು ಅದರಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಹಾಗೂ ಸಂವಿಧಾನ ಪಾಲನೆ ಮಾಡಲೇಬೇಕು ಎಂದು ವಕೀಲರಿಗೆ ಕಿವಿ ಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ದೇವಮಾನೆ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಚಂದ್ರಮೌಳಿ, ವಕೀಲರ ಸಂಘದ ಉಪಾಧ್ಯಕ್ಷ ಶಿವಣ್ಣೇಗೌಡ, ಕಾರ್ಯದರ್ಶಿ ಶಿವಣ್ಣ, ವಕೀಲ ತೊಟ್ಟವಾಡಿ ಟಿ.ಎಂ. ಮಹದೇವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.