Advertisement

ನಮ್ಮದು ನರೇಂದ್ರ ಮೋದಿ ಸಂಸ್ಕೃತಿ: ಸಿಎಂ ಬೊಮ್ಮಾಯಿ

11:52 PM Feb 10, 2023 | Team Udayavani |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಕಾಲವನ್ನು ಕರ್ತವ್ಯ ಕಾಲವೆಂದು ಕರೆದಿದ್ದು, ಭಾರತವನ್ನು ವಿಶ್ವದಲ್ಲಿ ಸರ್ವಶ್ರೇಷ್ಠ ಮಾಡುವ ಧ್ಯೇಯವನ್ನಿಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನದು ಟಿಪ್ಪು ಸುಲ್ತಾನ್‌ ಸಂಸ್ಕೃತಿ, ಬಿಜೆಪಿಯದ್ದು ನಾಲ್ವಡಿ ಕೃಷ್ಣರಾಜ ಸಂಸ್ಕೃತಿ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಯಾರ್ಯಾರು ಯಾವ ಸಂಸ್ಕೃತಿಯವರು ಎಂಬುದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ನರೇಂದ್ರ ಮೋದಿ ಸಂಸ್ಕೃತಿ. ಭಾರತವನ್ನು ಹಿಂದೆಂದಿಗಿಂತ ಅತ್ಯಂತ ಸಶಕ್ತ, ಸಮೃದ್ಧ, ಶ್ರೀಮಂತವಾಗಿ ಕಟ್ಟುವ ಕಾಲಾವಕಾಶವು ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರ ದೊರೆತಿದೆ. ಅದಕ್ಕಾಗಿ ಪ್ರಧಾನಿ ಮೋದಿ ಅಮೃತ ಕಾಲವನ್ನು ಕರ್ತವ್ಯ ಕಾಲವೆಂದಿದ್ದಾರೆ ಎಂದರು.

ಶಿವಮೊಗ್ಗ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಬೇಕೆನ್ನುವ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರು ಇಡಬೇಕೆನ್ನುವ ಬೇಡಿಕೆಯಿತ್ತು. ಈ ಕುರಿತು ತೀರ್ಮಾನ ಕೈಗೊಂಡಿದ್ದಾಗ ಯಡಿಯೂರಪ್ಪ ಅವರು ತಮ್ಮ ಹೆಸರು ಬೇಡವೆಂದು ಹೇಳಿದ್ದರು. ಇತ್ತೀಚೆಗೆ ಶಿವಮೊಗ್ಗಕ್ಕೆ ಹೋಗಿದ್ದಾಗ ಸಾರ್ವಜನಿಕರಿಂದ ಮತ್ತೆ ಒತ್ತಡ ಬಂದಿತ್ತು. ಹಿಂದಿನ ಮಾತನ್ನೇ ಅವರು ಪುನರುಚ್ಚರಿಸಿದ್ದಾರೆ. ಯಾರ ಹೆಸರು ಇಡಬೇಕೆನ್ನುವ ಕುರಿತು ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಲಕ್ಕುಂಡಿ ಐತಿಹಾಸಿಕ ಸ್ಥಳ. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಲಕ್ಕುಂಡಿ ಉತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.

Advertisement

ರಾಜಸ್ವ ಸಂಗ್ರಹಣೆಯಲ್ಲಿ ಶೇ.93 ಗುರಿ
ಬೆಂಗಳೂರು: ರಾಜಸ್ವ ಸಂಗ್ರಹಣೆಯಲ್ಲಿ ಶೇ.93 ಗುರಿ ಸಾಧಿಸಲಾಗಿದೆ. ಸ್ವಂತ ರಾಜಸ್ವವು ಕಳೆದ ಸಾಲಿಗೆ ಹೋಲಿಸಿದರೆ ಶೇ.21 ಹೆಚ್ಚಳವಾಗಿದೆ. ಕಳೆದ ವರ್ಷ ರಾಜ್ಯದ ಬಂಡವಾಳ ವೆಚ್ಚ 26,915 ಕೋಟಿ ರೂ.ನಷ್ಟಿದ್ದರೆ ಈ ಸಾಲಿನಲ್ಲಿ ಅದು 33,991 ಕೋಟಿ ರೂ.ಗೆ ಏರಿಕೆಯಾಗಿದೆ. ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಹೇಳಿದರು.

ಶುಕ್ರವಾರ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ಜನವರಿ 2023ರ ಹೊತ್ತಿಗೆ ಬಜೆಟ್‌ ನಲ್ಲಿ ನಿಗದಿ ಮಾಡಿದ ಹಣದಲ್ಲಿ ಶೇ.75ರಷ್ಟನ್ನು ಖರ್ಚು ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಇದು ಗಣನೀಯ ಹೆಚ್ಚಳವಾಗಿದೆ ಎಂದರು.

ಜಲ ಆಯೋಗದ ಸಮ್ಮತಿ : ಕಳಸಾ ಬಂಡೂರಾ ನಾಲಾ ತಿರುವು ಯೋಜನೆ ಡಿಪಿಆರ್‌ಗೆ ಕೇಂದ್ರ ಜಲ ಆಯೋಗ ಸಮ್ಮತಿಸಿದೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ 2.25 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಒದಗಿಸುವ ಜತೆಗೆ 367 ಕೆರೆಗೆಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡಿದ್ದು, 5300 ಕೋಟಿ ರೂ. ಅನುದಾನ ಘೋಷಿಸಿದೆ ಎಂದರು.

ಹೆದ್ದಾರಿ ಸುಧಾರಣೆ : ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿ ಜಾಲವನ್ನು ಅಭಿವೃದ್ಧಿಪಡಿಸಲು 5140 ಕೋಟಿ ರೂ. ಮಂಜೂರು ಮಾಡಲಾಗಿದ್ದು, 3500 ಕೋಟಿ ರೂ.ವೆಚ್ಚದಲ್ಲಿ 2275 ಕಿ ಮೀ ಉದ್ದದ ರಾಜ್ಯ ಹೆದ್ದಾರಿ ಸುಧಾರಣೆಯಾಗಿದೆ. 165 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುರಕ್ಷತಾ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು ರಾಜ್ಯ ಸರ್ಕಾರದ ಸುಮಾರು 323 ಯೋಜನೆಗಳನ್ನು ಡಿಬಿಟಿ ಆನ್‌ಬೋರ್ಡ್‌ ಮಾಡಲಾಗಿದೆ. ಸುಮಾರು 6,226.75 ಕೋಟಿ ರೂ.ಅನ್ನು 139.44 ಲಕ್ಷ ಫ‌ಲಾನುಭವಿಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.

ವಿದ್ಯುತ್‌ ಮಾರಾಟದಿಂದ ಗಳಿಕೆ
ಪ್ರಸಕ್ತ ಸಾಲಿನಲ್ಲಿ ರಾಜ್ಯದ ವಿವಿಧ ಇಂಧನ ಮೂಲಗಳಿಂದ 58,588 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದ್ದು, ರಾಜ್ಯದ ಅಗತ್ಯತೆಗಳನ್ನು ಪೂರೈಸಿ ಹೆಚ್ಚುವರಿಯಾದ 4326.45 ಮಿಲಿಯನ್‌ ಯುನಿಟ್‌ ವಿದ್ಯುತ್‌ನ್ನು ಮಾರಾಟ ಮಾಡಿ 2500 ಕೋಟಿ ರೂ. ಗಳಿಸಲಾಗಿದೆ. ಬೆಳಕು ಯೋಜನೆಯಲ್ಲಿ 2.35 ಲಕ್ಷ ವಿದ್ಯುತ್‌ ರಹಿತ ಮನೆಗಳಿಗೆ 124 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, 2030ರ ವೇಳೆಗೆ 500 ಗಿಗಾ ವ್ಯಾಟ್‌ ಸಾಮರ್ಥ್ಯದ ಹಸಿರು ಇಂಧನ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next