Advertisement
ರಾಜ್ಯದ ಪಂಚಾಯತ್ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಶೀಘ್ರತೆಯನ್ನು ತರುವ ಉಪಕ್ರಮವಾಗಿ ‘ನಮ್ಮ ಗ್ರಾಮ ನಮ್ಮ ಯೋಜನೆ’ಯನ್ನು ಅತ್ಯುತ್ತಮವಾಗಿ ಅನುಷ್ಠಾನ ಮಾಡಿದ ರಾಜ್ಯದ 100 ಗ್ರಾಮ ಪಂಚಾಯತ್‌ಗಳಿಗೆ ತಲಾ ರೂ. 10 ಲಕ್ಷಗಳ ಪ್ರೋತ್ಸಾಹಧನ ಪುರಸ್ಕಾರವನ್ನು 2017-18ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಘೋಷಿಸಿದ್ದರು. ಇದರ ಅನ್ವಯ 2016-17ನೇ ಸಾಲಿಗೆ ದ.ಕ. ಜಿಲ್ಲೆಯಲ್ಲಿ 4 ಗ್ರಾ.ಪಂ.ಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಲಾಗಿದ್ದು, ಪುತ್ತೂರು ತಾಲೂಕಿನಲ್ಲಿ ರಾಮಕುಂಜ ಗ್ರಾ.ಪಂ.ಗೆ 10 ಲಕ್ಷ ರೂ. ಪ್ರೋತ್ಸಾಹಧನ ಪುರಸ್ಕಾರ ಲಭಿಸಿದೆ.
ದ.ಕ. ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಎಕ್ಕಾರು, ಬಂಟ್ವಾಳ ತಾಲೂಕಿನಲ್ಲಿ ಕೋಳ್ನಾಡು, ಸುಳ್ಯ ತಾಲೂಕಿನಲ್ಲಿ ಕನಕಮಜಲು ಗ್ರಾಮ ಪಂಚಾಯತ್ ಪ್ರೋತ್ಸಾಹಧನ ಪುರಸ್ಕಾರಕ್ಕೆ ಆಯ್ಕೆಗೊಂಡಿವೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಆರ್.ಕೆ. ಅವರು, ‘ನಮ್ಮ ಗ್ರಾಮ ನಮ್ಮ ಯೋಜನೆ’ಯನ್ನು ರಾಮಕುಂಜ ಗ್ರಾ.ಪಂ.ನಲ್ಲಿ ಅತ್ಯುತ್ತಮವಾಗಿ ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದಡಿ ದೂರದೃಷ್ಟಿತ್ವದ ಯೋಜನೆಯನ್ನು ಸಿದ್ದಪಡಿಸಬೇಕಾಗಿರುತ್ತದೆ. ಪಂಚವಾರ್ಷಿಕ ಯೋಜನೆ ಸಿದ್ದಪಡಿಸಿಕೊಂಡು ಗ್ರಾಮಸಭೆಗಳಲ್ಲಿ ಜನರಿಂದ ಬಂದ ಬೇಡಿಕೆಗಳಿಗೆ ಅನುಗುಣವಾಗಿ ಕ್ರೀಯಾಯೋಜನೆ ಸಿದ್ಧಪಡಿಸಿ ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸರಕಾರದಿಂದ ಬರುವ ಅನುದಾನಗಳನ್ನು ಸಮರ್ಪಕವಾಗಿ ವಿನಿಯೋಗಿಸಲಾಗಿದೆ. ಇವೆಲ್ಲವನ್ನೂ ಪರಿಗಣಿಸಿ ಪ್ರೋತ್ಸಾಹಧನ ಪುರಸ್ಕಾರಕ್ಕೆ ರಾಮಕುಂಜ ಗ್ರಾ.ಪಂ. ಅನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Related Articles
ಪ್ರಶಸ್ತಿ ಪಡೆದ ಗ್ರಾಮ ಪಂಚಾಯತ್ ಗಳು 10 ಲಕ್ಷ ರೂ. ಅನುದಾನವನ್ನು ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರತ್ಯೇಕವಾಗಿ ಖಾತೆಯನ್ನು ತೆರೆದು ಆ ಖಾತೆಯ ಮೂಲಕ ವಿನಿಯೋಗಿಸಲು ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಸರಕಾರಿ ಶಾಲೆಗಳ ಆಟದ ಮೈದಾನಗಳಿಗೆ ಫ್ಲಡ್ ಲೈಟ್ ಅಳವಡಿಸುವುದು, ಗ್ರಾಮ ಪಂಚಾಯತ್ ಸಭೆಗಳ ನಡಾವಳಿಗಳ ನೇರ ಪ್ರಸಾರ ಮಾಡುವ ವ್ಯವಸ್ಥೆ ಕಲ್ಪಿಸುವುದು (ಲೋಕಲ್ ಕೇಬಲ್ ಟಿ.ವಿ.ಯಲ್ಲಿ ಪ್ರಸಾರ), ಸೋಲಾರ್ ಬೀದಿ ದೀಪ ಅಳವಡಿಸುವುದು, ಗ್ರಾಮೀಣ ಗೌರವ ಯೋಜನೆ, ಸಮುದಾಯ ಶೌಚಾಲಯ ಸಂಕೀರ್ಣ ನಿರ್ಮಾಣ, ಕಸ ಸಂಸ್ಕರಣ ಘಟಕ ಸ್ಥಾಪನೆ, ಕಡಿಮೆ ದುಡ್ಡಿನಲ್ಲಿ ಮಾಡಬಹುದಾದ ಚಟುವಟಿಕೆಗಳು, ದಾನಿಗಳಿಂದ ಮಾಡಬಹುದಾದ ಚಟುವಟಿಕೆಗಳು ಹಾಗೂ ಸರಕಾರದ ವಿವಿಧ ಯೋಜನೆಗಳ ಸಂಯೋಜನೆಯೊಂದಿಗೆ ಮಾಡಬಹುದಾದ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವುದು, ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವುದು, ಗ್ರಾಮ ಪಂಚಾಯತ್ ಕಚೇರಿಗೆ ಸಿಸಿ ಟಿವಿ ಅಳವಡಿಸುವುದು, ಡಿಜಿಟಲ್ ಲೈಬ್ರರಿಗಳ ಸ್ಥಾಪನೆಗೆ ಅನುದಾನ ವಿನಿಯೋಗಿಸಬಹುದಾಗಿದೆ.
Advertisement
ಪ್ರೋತ್ಸಾಹ ಧನಕ್ಕೆ ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ಕ್ರಿಯಾಯೋಜನೆ ತಯಾರಿಸಿಕೊಳ್ಳಬೇಕು. ಕ್ರೀಯಾ ಯೋಜನೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ನಿಯಮಾನುಸಾರ ವೆಚ್ಚ ಮಾಡಲು ಸೂಚಿಸಲಾಗಿದೆ.
ಕರ್ತವ್ಯ ಇಮ್ಮಡಿಗೊಂಡಿದೆಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ, ಹೊಂದಾಣಿಕೆ ಇದ್ದಲ್ಲಿ ಅಭಿವೃದ್ಧಿ ಕೆಲಸಗಳನ್ನು ವೇಗವಾಗಿ ಅನುಷ್ಠಾನಗೊಳಿಸಲು ಸಾಧ್ಯ. ನಮ್ಮಲ್ಲಿ ಪಂಚಾಯತ್ ಸದಸ್ಯರ, ಅಧಿಕಾರಿಗಳ, ಸಿಬಂದಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಹಲವಾರು ಅಭಿವೃದ್ಧಿ ಕೆಲಸ ನಡೆದಿದೆ. ಸರಕಾರದಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. 2016-17ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು, ಅದರಲ್ಲಿ 5 ಲಕ್ಷ ರೂ. ಅನುದಾನ ಬಂದಿದೆ. ಇದೀಗ ನಮ್ಮ ಗ್ರಾಮ ನಮ್ಮ ಯೋಜನೆ ಅತ್ಯುತ್ತಮ ನಿರ್ವಹಣೆಗಾಗಿ ಲಭಿಸಿದ 10 ಲಕ್ಷ ರೂ. ಪ್ರೋತ್ಸಾಹಧನವು ನಮ್ಮ ಕರ್ತವ್ಯವನ್ನು ಇಮ್ಮಡಿಗೊಳಿಸಿದೆ.
– ಪ್ರಶಾಂತ್ ಆರ್.ಕೆ.
ಅಧ್ಯಕ್ಷರು, ರಾಮಕುಂಜ ಗ್ರಾಮ ಪಂಚಾಯತ್