Advertisement
ಪ್ರಪಂಚದ ಅಂದಾಜು 8 ಮಿಲಿಯನ್‌ಗಳಷ್ಟಿರುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಲ್ಲಿ ಒಂದು ಮಿಲಿ ಯನ್‌ನಷ್ಟು ಅಪಾಯ ಹಾಗೂ ಅಳಿವಿನಂಚಿನಲ್ಲಿದೆ ಎಂದು ಹೇಳಲಾಗಿದೆ. ಇಂಟರ್‌ನ್ಯಾಶನಲ್ ಯುನಿಯನ್ ಫಾರ್ ಕನ್ಸರ್‌ವೇಶನ್ ಆಫ್ ನೇಚರ್ ಪ್ರಕಾರ 42,100ಕ್ಕಿಂತಲೂ ಹೆಚ್ಚು ಪ್ರಭೇದಗಳು ಕೆಂಪುಪಟ್ಟಿಯಲ್ಲಿ ಅದರಲ್ಲೂಅಪಾಯ ಮತ್ತು ಅಳಿವಿನಂಚಿನಲ್ಲಿವೆ.
Related Articles
Advertisement
ಪ್ರಪಂಚದ 190 ದೇಶಗಳ ಪೈಕಿ 17 ದೇಶಗಳು ಮೆಗಾಡೈವರ್ಸ್ ಎಂಬ ಬಿರುದನ್ನು ಪಡೆದಿವೆ. ಅಂದರೆ ಈ ದೇಶಗಳು ಶೇ.70 ರಷ್ಟು ಜೀವವೈವಿಧ್ಯತೆಯನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿವೆ. ಭಾರತವೂ ಈ ದೇಶಗಳಲ್ಲಿ ಒಂದು. ಅಂದರೆ ವಿಶ್ವದ ಶೇ. 7ರಿಂದ 8ರಷ್ಟು ಪ್ರಭೇದಗಳು ಭಾರತದಲ್ಲಿ ಕಾಣ ಸಿಗುತ್ತವೆ. ಇದರಲ್ಲಿ ಅಂದಾಜು 96,000 ಪ್ರಾಣಿ ಪ್ರಭೇದಗಳು, 47,000 ಸಸ್ಯ ಪ್ರಭೇದಗಳು. ದೇಶವು ಹಸುರು ಹಾಗೂ ಪ್ರಾಕೃತಿಕ ವಾಗಿ ಸಂಪದ್ಭರಿತವಾಗಿದೆ ಎಂದು ಖುಷಿಯೇನೋ ಪಡಬಹುದು. ಆದರೆ ಈ ಸಂಪತ್ತು ನಶಿಸುತ್ತಿದೆ ಎಂಬುದು ವಾಸ್ತವದ ಸ್ಥಿತಿಯಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.
ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳು
n 12.6% ಸಸ್ತನಿಗಳು
n 4.5% ಪಕ್ಷಿಗಳು
n 45.8% ಸರೀಸೃಪಗಳು
n 55.8% ಉಭಯಚರಗಳು
n 33%ರಷ್ಟು ಭಾರತೀಯ ಸ್ಥಳೀಯ ಸಸ್ಯಗಳು ನಶಿಸಿ ಹೋಗಿದ್ದು ಎಲ್ಲಿಯೂ ಕಂಡುಬರುತ್ತಿಲ್ಲ.
ಪ್ರಕೃತಿಯೇ ಉಸಿರು, ಪ್ರಕೃತಿಯನ್ನು ಉಳಿಸಿ ಬೆಳೆಸಿ ಅನ್ನುವ ಸಾಲುಗಳು ಕೇವಲ ಘೋಷಣೆ, ಮಾತುಗಳಿಗೆ ಸೀಮಿತವಾಗದೇ ಪ್ರಕೃತಿಯ ಉಳಿವಿಗಾಗಿ ನಿಜವಾಗಿಯೂ ಶ್ರಮಿಸುವ ಕಾಲವಿದು. ಇದಾಗಲೇ ಪರಿಸರವಾದಿಗಳು ಪ್ರಕೃತಿಯ ಉಳಿವಿಗೆ ಎಚ್ಚರಿಕೆಯ ಕರೆಘಂಟೆಯನ್ನು ನೀಡಿದ್ದಾಗಿದೆ. ಈ ಅವಕಾಶವೂ ಕೈ ತಪ್ಪಿದರೆ ಆ ಬಳಿಕ ಮಾನವ ಕುಲಕ್ಕೆ ಯಾವ ಅವಕಾಶವೂ ಇಲ್ಲ ಎಂಬುದನ್ನು ಬಹುತೇಕ ವರದಿಗಳು ಸಾರಿ ಹೇಳುತ್ತಿವೆ. ಸರಕಾರಗಳು ಪ್ರಕೃತಿ, ಜೀವವೈವಿಧ್ಯಗಳ ರಕ್ಷಣೆಗಾಗಿ ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ ಪ್ರತೀ ಒಬ್ಬ ಮನುಷ್ಯನೂ ಪ್ರಕೃತಿಯ ಸಂರಕ್ಷಣೆಯೆಡೆಗೆ ಹೆಜ್ಜೆ ಇರಿಸಿದರೆ ಮಾತ್ರ ಪ್ರಕೃತಿಯೊಂದಿಗೆ ನಾವು ಉಳಿಯಲು ಸಾಧ್ಯ!.
ಪಶ್ಚಿಮ ಘಟ್ಟದಲ್ಲೇ ಹೆಚ್ಚು
ವಿಶ್ವದಲ್ಲಿರುವ 30ಕ್ಕೂ ಹೆಚ್ಚು ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳಲ್ಲಿ ಭಾರತ ನಾಲ್ಕು ಹಾಟ್‌ಸ್ಪಾಟ್‌ಗಳನ್ನು ಹೊಂದಿವೆ. ಹಿಮಾಲಯ, ಇಂಡೋ-ಬರ್ಮಾ ಪ್ರದೇಶ, ಪಶ್ಚಿಮ ಘಟ್ಟಗಳು ಹಾಗೂ ಸುಂದರ್‌ಲ್ಯಾಂಡ್. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಸುಮಾರು 325 ಜಾತಿಯ ಪ್ರಭೇದಗಳು ಪಶ್ಚಿಮ ಘಟ್ಟದಲ್ಲೇ ಕಂಡುಬರುತ್ತವೆ. ಇದರಲ್ಲಿ 229 ಸಸ್ಯ ಪ್ರಭೇದಗಳು, 31 ಸಸ್ತನಿ ಪ್ರಭೇದಗಳು, 15 ಪಕ್ಷಿ ಪ್ರಭೇದಗಳು, 43 ಉಭಯಚರಗಳ ಪ್ರಭೇದಗಳು, 5 ಸರೀಸೃಪ ಪ್ರಭೇದಗಳು ಹಾಗೂ ಒಂದು ಮೀನಿನ ಪ್ರಭೇದ ಅಳಿವಿನಂಚಿನಲ್ಲಿದೆ.
~ ವಿಧಾತ್ರಿ ಭಟ್, ಉಪ್ಪುಂದ