Advertisement

ಟಿಪ್ಪು ಜಯಂತಿ ಆಚರಣೆಯ ನಮ್ಮ ನಿಲುವು ಅಚಲ

05:03 PM Nov 11, 2017 | Team Udayavani |

ಬೆಂಗಳೂರು: ರಾಜಕೀಯ ಕಾರಣಕ್ಕೆ ಯಾರು ಎಷ್ಟೇ ವಿರೋಧ ಮಾಡಿದರೂ ಟಿಪ್ಪು ಜಯಂತಿ ಆಚರಿಸುವ ನಮ್ಮ ನಿಲುವು ಅಚಲ. ಮತ, ಅಧಿಕಾರಕ್ಕಾಗಿ ಟಿಪ್ಪು ಜಯಂತಿ ಆಚರಿಸುತ್ತಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ, ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಬರಲಿದೆ. ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದು ಘೋಷಿಸಿದರು.

Advertisement

ರಾಜ್ಯ ಸರ್ಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವತಿಯಿಂದ ಮೂರನೇ ಬಾರಿಗೆ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ.

ಈ ಬಾರಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಚರಿಸುವ ಆಶಯವಿತ್ತು. ಆದರೆ, ಅಹಿತಕರ ಘಟನೆ ನಡೆಯದಂತೆ ತಡೆಯಲು ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಚರಿಸಲಾಗಿದೆ. ಮುಂದಿನ ವರ್ಷ ವಿಧಾನಸೌಧದ ಮುಂಭಾಗ ಆಚರಿಸಲಾಗುವುದು ಎಂದು ಪುನರುಚ್ಚರಿಸಿದರು.

ಮೊದಲ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿದ್ದು ಹೊರತುಪಡಿಸಿದರೆ ಬೇರೆಲ್ಲೂ ವಿರೋಧವಿರಲಿಲ್ಲ. ಎರಡನೇ ವರ್ಷ ಎಲ್ಲಿಯೂ ವಿರೋಧವಿಲ್ಲದೆ ನಡೆಯಿತು. ಆದರೆ ಈ ಬಾರಿ ಜಯಂತಿ ಆಚರಣೆಗೆ ಪರ- ವಿರೋಧ ವ್ಯಕ್ತವಾಯಿತು.ರಾಜಕೀಯ ಕಾರಣಕ್ಕಾಗಿ ಕೆಲವರು ಟಿಪ್ಪುವನ್ನು ಹಿಂದು ವಿರೋಧಿ, ಧರ್ಮಾಂಧ, ಕನ್ನಡ ವಿರೋಧಿ ಎಂಬುದಾಗಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಜ್ಯದೆಲ್ಲೆಡೆ ಟಿಪ್ಪು ಜಯಂತಿ ಶಾಂತಿಯುತವಾಗಿ ನಡೆದಿದೆ.ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಬೇಡಿ ಎಂದವರ ಹೆಸರನ್ನು ಕೈಬಿಡಲು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದರು. ಆಮೀರ್‌- ಎ- ಷರಿಯತ್‌ನ ಹಜರತ್‌ ಮೌಲಾನಾ ಸಗೀರ ಅಹ್ಮದ್‌ ಖಾನ ಸಾಹೇಬ್‌ ರಷಾದಿ ಮಾತನಾಡಿ, ಬೆಂಗಳೂರಿನಿಂದ ದೇವನಹಳ್ಳಿಗೆ ಸಂಪರ್ಕಿಸುವ ಬಳ್ಳಾರಿ ರಸ್ತೆಗೆ ಟಿಪ್ಪು ಸುಲ್ತಾನ್‌ ಹೆಸರನ್ನು ನಾಮಕರಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಕಿರೀಟ, ಬೆಳ್ಳಿ ಖಡ್ಗ, ಹೂಮಾಲೆಯನ್ನು ತೊಡಿಸಿದ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಅಭಿನಂದನೆ ಸಲ್ಲಿಸಿದರು. ಬಳಿಕ ಹಲವರು ಕಿರೀಟ, ಖಡ್ಗ ನೀಡಿ ಸನ್ಮಾನಿಸಿದರು. ಸಾಹಿತಿ ಡಾ.ಎಲ್‌.ಹನುಮಂತಯ್ಯ ಅವರು ವಿಶೇಷ ಉಪನ್ಯಾಸ ನೀಡಿದರು. ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಸಚಿವರಾದ ರಾಮಲಿಂಗಾರೆಡ್ಡಿ, ಉಮಾಶ್ರೀ, ಕೆ.ಜೆ.ಜಾರ್ಜ್‌, ಆರ್‌.ರೋಷನ್‌ ಬೇಗ್‌, ಎಚ್‌.ಎಂ.ರೇವಣ್ಣ, ಮೇಯರ್‌ ಆರ್‌.ಸಂಪತ್‌ರಾಜ್‌, ವಿಧಾನ ಪರಿಷತ್‌ ಸದಸ್ಯರಾದ ರಿಜ್ವಾನ್‌ ಹರ್ಷದ್‌, ವಿನೀಶಾ ನಿರೋ, ಉರಿಲಿಂಗಪೆದ್ದಿಗಳ ಮಠದ ಜ್ಞಾನಪ್ರಕಾಶ ಸ್ವಾಮಿ ಇತರರು ಉಪಸ್ಥಿತರಿದ್ದರು.

ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಗಳಾಗಿದ್ದಾಗ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಇದೀಗ ವಿರೋಧಿಸುತ್ತಿರುವ ಅವರಿಗೆ ಎರಡು ನಾಲಿಗೆ ಇದೆಯೇ. ಕೆಜೆಪಿಯಲ್ಲಿದ್ದಾಗ ಅಲ್ಲಾ ಮೇಲಾಣೆ ಎಂದಿಗೂ ಬಿಜೆಪಿಗೆ ಹೋಗುವುದಿಲ್ಲ ಎಂದು ಯಡಿಯೂರಪ್ಪ ಟಿಪ್ಪುವನ್ನು ಹೊಗಳಲಿಲ್ಲವೇ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರು ಹಾಡಿ ಟಿಪ್ಪುವನ್ನು ಹೊಗಳಿದ್ದಾರೆ. ಇದೀಗ ಚುನಾವಣೆ ಬರುತ್ತಿರುವುದರಿಂದ ಮತಕ್ಕಾಗಿ ವಿರೋಧಿಸುವುದು ನ್ಯಾಯವೇ?
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next