Advertisement

ನಮ್ಮ ರಕ್ಷಣೆಗಾಗಿಯೇ ಕಾನೂನು ಪಾಲನೆ

12:56 PM Mar 10, 2017 | Team Udayavani |

ದಾವಣಗೆರೆ: ನಮ್ಮ ರಕ್ಷಣೆಗೆಂದೇ ಇರುವ ಕಾನೂನುಗಳನ್ನು ಪರಿಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುವರ್ಣ ಕೆ ಮಿರ್ಜಿ ಹೇಳಿದರು. 

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದಿಂದ ಗುರುವಾರ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಟೋರಿಕ್ಷಾ ಮತ್ತು ಖಾಸಗಿ ಬಸ್‌ ಚಾಲಕರಿಗೆ ಕಾನೂನು ಅರಿವು ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಅವರು, ನಾವು ಭ್ರೂಣಾವಸ್ಥೆಯಿಂದ ಸಾಯುವವರೆಗೆ ಕಾನೂನಿನ ಚೌಕಟ್ಟಿಗೆ ಒಳಪಟ್ಟಿರುತ್ತೇವೆ.

ಪ್ರತಿಯೊಬ್ಬರೂ  ಪ್ರಮುಖ ಕಾನೂನುಗಳ ಬಗ್ಗೆ ತಿಳಿದುಕೊಂಡು ಪಾಲಿಸಬೇಕಿದೆ ಎಂದರು. ಹೆಲ್ಮೆಟ್‌ ಕಡ್ಡಾಯಗೊಳಿಸಿರುವುದು ನಮ್ಮ ಸುರಕ್ಷತೆಗಾಗಿ. ಅದನ್ನು ಎಲ್ಲರೂ ಪಾಲಿಸಬೇಕು. ಆಟೋ ಮತ್ತು ಬಸ್‌ ಚಾಲಕರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು.

ಇದರಿಂದ  ತಾವು ಹಾಗೂ ಇತರರು  ರಕ್ಷಿತವಾಗಿರಬಹುದು. ಆಟೋ ಚಾಲಕರು ತಡರಾತ್ರಿಯಲ್ಲಿ ಗ್ರಾಹಕರಿಂದ ಹೆಚ್ಚು ಬಾಡಿಗೆ ಪಡೆಯದೇ  ರಸ್ತೆ ನಿಯಮ ಪಾಲನೆ ಮೂಲಕ ಉತ್ತಮ ಸೇವೆ ನೀಡಬೇಕೆಂದು ಅವರು ಕಿವಿಮಾತು ಹೇಳಿದರು.  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಬಹುತೇಕ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ, ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ,  ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನೇಕ ಸೌಲಭ್ಯಗಳಿದ್ದು ಅವುಗಳ ಸದುಪಯೋಗ ಪಡೆಯಬೇಕು ಎಂದು ಅವರು ತಿಳಿಸಿದರು. ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ.

Advertisement

ಅದಕ್ಕಾಗಿ ಲೋಕ ಅದಾಲತ್‌ ಮೂಲಕ ಸಣ್ಣ ಪುಟ್ಟ ಕ್ರಿಮಿನಲ್‌, ಸಿವಿಲ್‌ ಮತ್ತು ಪ್ರಿ-ಲಿಟಿಗೇಷನ್‌ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಸಾಲಬಾಧೆಗೆ ಆತ್ಯಹತ್ಯೆ ಪರಿಹಾರವಲ್ಲ. ಲೋಕ ಅದಾಲತ್‌ ಸಂಧಾನದ ಮೂಲಕ ಪರ್ಯಾಯ ಕಂಡುಕೊಳ್ಳಬಹುದು ಎಂದು ಅವರು ಸಲಹೆನೀಡಿದರು. 

ವಕೀಲ ಎಚ್‌.ಎಸ್‌. ಯೋಗೇಶ್‌, ಮೋಟಾರು ವಾಹನ ಕಾಯ್ದೆ ವಿಷಯ ಕುರಿತು ಉಪನ್ಯಾಸ ನೀಡಿ, ಪ್ರಾಪ್ತ ವಯಸ್ಸಿನವರು ನಿಯಮಾನುಸಾರ ವಾಹನ ಪರವಾನಗಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಡಿಎಲ್‌, ಆರ್‌ಸಿ ಬುಕ್‌ ಮತ್ತು ವಿಮೆ ಪ್ರತಿಯನ್ನು ತಮ್ಮೊಂದಿಗೆ ಇರಿಸಿಕೊಂಡಿರಬೇಕು. ಪೋಷಕರು ಯಾವುದೇಕಾರಣಕ್ಕೂ ಅಪ್ರಾಪ್ತ ವಯಸ್ಕರ ಕೈಗೆ ವಾಹನ ನೀಡಬಾರದು ಎಂದು ಹೇಳಿದರು. 

ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್‌. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಎಚ್‌. ಹಿರೇಗೌಡರ್‌, ಮೋಟಾರು ವಾಹನ ನಿರೀಕ್ಷಕ ಮೊಹಮ್ಮದ್‌ ಖಾಲಿದ್‌, ಲಾರಿ ಚಾಲಕರ ಸಂಘದ ಅಧ್ಯಕ್ಷ ಸೈಫುಲ್ಲಾ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next