ಹೊಸದಿಲ್ಲಿ : “ನಮ್ಮ ಸಚಿವರು ಅತ್ಯಾಚಾರಿಗಳಲ್ಲ” ಎಂದು ಕಥುವಾ ರೇಪ್ ಮತ್ತು ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಕೇಳಿ ಬಂದಿರುವ ಆರೋಪಗಳಿಗೆ ಬಿಜೆಪಿ ಉತ್ತರ ನೀಡಿದೆ.
ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸಿನ ಆರೋಪಿಗಳಿಗೆ ಬೆಂಬಲವಾಗಿ ನಡೆದಿದ್ದ ರಾಲಿಯಲ್ಲಿ ಜಮ್ಮು ಕಾಶ್ಮೀರದ ಇಬ್ಬರು ಬಿಜೆಪಿ ಸಚಿವರು ಭಾಗವಹಿಸಿದ್ದರಿಂದ ಉಂಟಾದ ವಿವಾದವನ್ನು ಶಮನಗೊಳಿಸುವ ಪ್ರಯತ್ನವಾಗಿ ಇಂದು ಶನಿವಾರ ಬಿಜೆಪಿ ಈ ಮಾತುಗಳನ್ನು ಆಡಿದೆ.
ಬಿಜೆಪಿ ನಾಯಕರನ್ನು ಸಮರ್ಥಿಸುತ್ತಾ ರಾಮ ಮಾಧವ ಅವರು, “ಮಾರ್ಚ್ 1ರಂದು ಕಥುವಾದಲ್ಲಿ ಜನರ ಭಾರೀ ದೊಡ್ಡ ಗುಂಪು ಸೇರಿತ್ತು. ನಮ್ಮ ಸಚಿವರು ಉದ್ರಿಕ್ತ ಸಮೂಹವನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ ಅಲ್ಲಿಗೆ ಹೋಗಿದ್ದರು. ಆದರೆ ಅವರ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಯಿತು. ಅವರು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಿತ್ತು. ತನಿಖೆಗೆ ತಡೆಯೊಡ್ಡುವುದು ಅವರ ಉದ್ದೇಶವಾಗಿರಲಿಲ್ಲ. ಅವರು ಅತ್ಯಾಚಾರಿಗಳ-ಪರ ಎಂಬ ಆರೋಪಗಳು ನಿಜವಲ್ಲ’ ಎಂದು ಹೇಳಿದರು.
ಕಳಂಕಿತ ಬಿಜೆಪಿ ಸಚಿವರಾದ ಚಂದರ್ ಪ್ರಕಾಶ್ ಗಂಗಾ ಮತ್ತು ಲಾಲ್ ಸಿಂಗ್ ಅವರು ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಿದ ಒಂದು ದಿನದ ತರುವಾಯ ರಾಮ ಮೋಹನ್ ಅವರಿಂದ ಈ ಸಮರ್ಥನೆ ಬಂದಿದೆ.
Related Articles
ಬಿಜೆಪಿಯು ತನ್ನ ಇಬ್ಬರು ಸಚಿವರ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಕಳುಹಿಸಿ ಕೊಡಲಿದೆ ಎಂದವರು ಹೇಳಿದರು. ಕಥುವಾ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ-ಪಿಡಿಪಿ ಮೈತ್ರಿಕೂಟಕ್ಕೆ ಯಾವುದೇ ಧಕ್ಕೆ ಇಲ್ಲ ಎಂದವರು ಹೇಳಿದರು.