Advertisement

ಕನ್ನಡ ಪ್ರೀತಿ ತೋರಿದ ನಮ್ಮ ಮೆಟ್ರೋ

11:40 AM Jul 10, 2018 | Team Udayavani |

ಬೆಂಗಳೂರು: ಹಿಂದಿ ಹೇರಿಕೆಯಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಈಗ ಅದೇ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ಪುಸ್ತಕಗಳ ಮಾರಾಟ ಮಳಿಗೆ ತೆರೆಯಲು ಶೇ.50ರಷ್ಟು ರಿಯಾಯ್ತಿ ಕಲ್ಪಿಸಿ, ಕನ್ನಡಿಗರ ಮನ ಗೆಲ್ಲಲು ಮುಂದಾಗಿದೆ. 

Advertisement

ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಹೆಚ್ಚು ಓಡಾಡುವ ನಿಲ್ದಾಣಗಳನ್ನು ಗುರುತಿಸಿ, ಅಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆ ತೆರೆಯಲು ಅವಕಾಶ ಕಲ್ಪಿಸಿದೆ. ಹಾಗೂ ಈ ನಿಟ್ಟಿನಲ್ಲಿ ಮುಂದೆ ಬರುವವರಿಗೆ ಉಳಿದ ಮಳಿಗೆಗಳಿಗಿಂತ ಶೇ.50ರಷ್ಟು ಕಡಿಮೆ ದರದಲ್ಲಿ ಜಾಗ ಬಾಡಿಗೆಗೆ ನೀಡಲು ನಿರ್ಧರಿಸಿದೆ.

ಪ್ರಾಯೋಗಿಕವಾಗಿ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಕೇವಲ ಕನ್ನಡದ ಪುಸ್ತಕಗಳ ಮಾರಾಟ ಮಳಿಗೆ ತೆರೆಯಲು ಟೆಂಡರ್‌ ಕರೆದಿದ್ದು, 1,925 ಚದರಡಿ ಜಾಗಕ್ಕೆ 50 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇಲ್ಲಿ ಸಾಮಾನ್ಯವಾಗಿ 50 ರೂ.ಗಳಿಗೆ ಚದರಡಿ ಬಾಡಿಗೆ ದರ ಇದ್ದರೆ, ಕನ್ನಡ ಪುಸ್ತಕ ಮಳಿಗೆ ತೆರೆಯಲು 25 ರೂ.ಗೆ ನೀಡಲಾಗುತ್ತಿದೆ.

ರಿಯಾಯ್ತಿ ದರದಲ್ಲಿ ಬಾಡಿಗೆ ಕೊಡುತ್ತಿರುವುದು ಇದೇ ಮೊದಲು. ಇಲ್ಲಿ ಯಾವುದೇ ಮಾದರಿಯ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲು ಅವಕಾಶವಿದೆ ಎಂದು ಪ್ರಧಾನ ವ್ಯವಸ್ಥಾಪಕ (ಹಣಕಾಸು) ಯು.ಎ. ವಸಂತರಾವ್‌ ತಿಳಿಸಿದರು.

ಕಡಿಮೆಯಾಗದ ಹಿಂದಿ ಮೋಹ: ಈಗ ಕನ್ನಡದ ಬಗ್ಗೆ ಕಾಳಜಿ ತೋರಿದ್ದರೂ ನಿಗಮದ ಹಿಂದಿ ಮೋಹ ಕಡಿಮೆಯಾಗಿಲ್ಲ. ನಿಲ್ದಾಣ ಮತ್ತು ಮೆಟ್ರೋ ರೈಲುಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದಕ್ಕೆ ಪ್ರತಿಯಾಗಿ ಬಿಎಂಆರ್‌ಸಿಎಲ್‌ ಕೂಡ ಹಟಕ್ಕೆ ಬಿದ್ದು, ಕೇಂದ್ರದ ಆದೇಶ ಮುಂದಿಟ್ಟುಕೊಂಡು ಹಿಂದಿ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

Advertisement

ಕೊನೆಗೆ ಸರ್ಕಾರ ಮಧ್ಯಪ್ರವೇಶಿಸಿ, ದೇಶದ ಇತರೆ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಅಳವಡಿಸಿರುವ ನಾಮಫ‌ಲಕಗಳಲ್ಲಿ ಬಳಸಿರುವ ಭಾಷೆಗಳ ಅಧ್ಯಯನ ಮಾಡಿ, ವರದಿ ಸಲ್ಲಿಸುವಂತೆ ನಿಗಮಕ್ಕೆ ಸೂಚಿಸಿತು. ವರದಿ ಆಧರಿಸಿ ಹಿಂದಿ ಫ‌ಲಕ ತೆರವುಗೊಳಿಸಲು ಸರ್ಕಾರ ಆದೇಶಿಸಿತ್ತು. ಆದರೆ, ಇನ್ನೂ ಅಲ್ಲಲ್ಲಿ ಹಿಂದಿ ಫ‌ಲಕಗಳಿವೆ.

ಅರ್ಜಿ ಸಲ್ಲಿಸಲು 21 ಕೊನೆಯ ದಿನ: ಕನ್ನಡ ಮತ್ತು ಕನ್ನಡದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. ವಿಜಯನಗರದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಪ್ರಾಯೋಗಿಕವಾಗಿ ಅವಕಾಶ ಕಲ್ಪಿಸಲಾಗುತ್ತಿದೆ. ಲಾಲ್‌ಬಾಗ್‌ ನಿಲ್ದಾಣದಲ್ಲಿ ತೆರೆಯಲಿಕ್ಕೂ ಚಿಂತನೆ ನಡೆದಿದೆ.

ಉತ್ತಮ ಸ್ಪಂದನೆ ದೊರೆತರೆ, ಉಳಿದೆಲ್ಲ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು. ಮಳಿಗೆ ತೆರೆಯಲು ಈವರೆಗೆ 20ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಜು.21ರವರೆಗೆ ಅವಕಾಶವಿರುವ ಕಾರಣ ಸಾಕಷ್ಟು ಅರ್ಜಿಗಳು ಬರುವ ನಿರೀಕ್ಷೆ ಇದೆ ಎಂದು ಯು.ಎ. ವಸಂತರಾವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next