Advertisement

ಕಾಂಗ್ರೆಸ್‌ ಉಸಿರು ನಿಲ್ಲಿಸುವುದೇ ನಮ್ಮ ಸಂಕಲ್ಪ

12:05 PM Apr 21, 2022 | Team Udayavani |

ದಾವಣಗೆರೆ: ಇಡೀ ದೇಶದಲ್ಲಿ ಕಾಂಗ್ರೆಸ್‌ ನಿರ್ನಾಮವಾಗಿದ್ದು, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಸ್ವಲ್ಪ ಉಸಿರಾಡುತ್ತಿದೆ. ಆ ಉಸಿರಾಟ ನಿಲ್ಲಿಸುವುದೇ ನಮ್ಮ ಸಂಕಲ್ಪ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ನಗರದ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್‌ ಉಸಿರಾಡುತ್ತಿರುವುದರಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮಾತನಾಡುತ್ತಿದ್ದಾರೆ. ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನ ಉಸಿರಾಟ ಸಂಪೂರ್ಣ ನಿಲ್ಲುತ್ತದೆ. ಅದನ್ನು ನಾವು ಮಾಡಿ ತೋರಿಸುತ್ತೇವೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ನ 377 ಜನರು ಠೇವಣಿ ಕಳೆದುಕೊಂಡಿದ್ದರೆ, ಇಬ್ಬರು ಮಾತ್ರ ಗೆದ್ದಿದ್ದಾರೆ. ಇದೇ ಸ್ಥಿತಿ ರಾಜ್ಯ ಕಾಂಗ್ರೆಸ್ಸಿಗೂ ಬರಲಿದೆ. ಕಾಂಗ್ರೆಸ್‌ನವರು ಹಣ ಬಲ, ತೋಳ್ಬಲ, ಹೆಂಡದ ಬಲದ ಜತೆಗೆ ಜಾತಿಯ ವಿಷ ಬೀಜ ಬಿತ್ತಿ ಗೆಲ್ಲುತ್ತಿದ್ದರು. ಈಗ ಆ ಕಾಲ ಇಲ್ಲ. ಮತದಾರರು ಜಾಗೃತರಾಗಿದ್ದಾರೆ ಎಂದರು.

ಚುನಾವಣೆಗೆ ಇನ್ನೂ ಒಂದು ವರ್ಷವಿದೆ ಎಂದು ಮೈಮರೆಯುವುದು ಬೇಡ. ಈಗಿನಿಂದಲೇ ಮನೆ ಮನೆ ಭೇಟಿ, ಸಭೆ ಮೂಲಕ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಪ್ರತಿ ಗ್ರಾಮಗಳಲ್ಲೂ ಬಿಜೆಪಿಗೆ ಬಲ ತುಂಬಬೇಕು. ಚುನಾವಣೆಯಲ್ಲಿ ಯಾರು ನಿಲ್ಲುತ್ತಾರೆ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರದ್ದು ಎಂದರು.

ಸಚಿವರಾದ ಆರ್‌. ಅಶೋಕ್‌, ಗೋವಿಂದ ಕಾರಜೋಳ, ಬೈರತಿ ಬಸವರಾಜ, ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ. ರವೀಂದ್ರನಾಥ, ಪ್ರೊ| ಲಿಂಗಣ್ಣ, ವಿಧಾನ ಪರಿಷತ್‌ ಸದಸ್ಯರಾದ ಎನ್‌. ರವಿ ಕುಮಾರ್‌, ಕೆ.ಎಸ್‌. ನವೀನ್‌ ಇನ್ನಿತರ ಪ್ರಮುಖರು ವೇದಿಕೆಯಲ್ಲಿದ್ದರು.

ತಬ್ಬಲಿಗಳಾದ ಕಾಂಗ್ರೆಸ್ಸಿಗರು: ನಾವು ಪ್ರಧಾನಿ ಮೋದಿ ಹೆಸರು ಹೇಳಿ ಮತ ಕೇಳು ತ್ತೇವೆ. ಆದರೆ ಕಾಂಗ್ರೆಸ್ಸಿನವರಿಗೆ ಹೆಸರು ಹೇಳಲು ನಾಯಕರೇ ಇಲ್ಲದಂತಾಗಿದೆ. ಹಾಗಾಗಿ ರಾಜ್ಯ ಕಾಂಗ್ರೆಸ್‌ ಮುಖಂಡರು ತಬ್ಬಲಿ ಮಕ್ಕಳಂತಾಗಿದ್ದಾರೆ ಎಂದು ಬಿಎಸ್‌ವೈ ವ್ಯಂಗ್ಯವಾಡಿದರು.

Advertisement

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಯಡಿಯೂರಪ್ಪ ಮನೆಗೆ ಹೋಗಿ ಮಲಗುತ್ತಾರೆ ಎಂದು ಕಾಂಗ್ರೆಸ್‌ನವರು ಹಗುರವಾಗಿ ಮಾತನಾಡುತ್ತಿದ್ದರು. ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಹೋದಲ್ಲೆಲ್ಲ ನನಗೆ ಮುಖ್ಯಮಂತ್ರಿಗೆ ಸಿಗುವ ಗೌರವವೇ ಸಿಗುತ್ತಿದೆ. 150 ಸ್ಥಾನ ಗೆಲ್ಲುವ ಗುರಿ ಮುಟ್ಟುವವರೆಗೆ ನಾನು ವಿಶ್ರಮಿಸುವುದಿಲ್ಲ. ●ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

ಬಿಜೆಪಿ 150 ಸ್ಥಾನಗಳ ಗುರಿಯೊಂದಿಗೆ ಹೆಜ್ಜೆ ಇಟ್ಟಿದ್ದು, ಇದರ ಪರಿಣಾಮ ರಾಜ್ಯದಲ್ಲಿ ಚುನಾವಣೆ ಬಳಿಕ ಜೆಡಿಎಸ್‌ ಕಾಣೆಯಾಗಲಿದೆ. ಅಲ್ಪಸಂಖ್ಯಾತರ ಓಲೈಕೆ ಬಿಟ್ಟರೆ ಕಾಂಗ್ರೆಸ್‌ಗೆ ಬೇರೆ ಏನೂ ಇಲ್ಲ. ಇನ್ನು ಬಹುಸಂಖ್ಯಾತರ ಬಗ್ಗೆ ಕಾಂಗ್ರೆಸ್‌ ಮಾತನಾಡು ವುದೇ ಇಲ್ಲ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಗೇಟ್‌ಪಾಸ್‌ ಪಡೆಯಲು ಸಿದ್ಧವಾಗಿದೆ. ●ಆರ್‌.ಅಶೋಕ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next