ಆಲಿಗಢ : ಮುಸ್ಲಿಮರ ರಕ್ತದಿಂದ ಕಾಂಗ್ರೆಸ್ ಕೈ ಕಳಂಕಿತವಾಗಿದೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಆಲಿಗಢ ಮುಸ್ಲಿ ವಿಶ್ವವಿದ್ಯಾಲಯದಲಿ ನಡೆದಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದರು.
ಈ ಸಂವಾದ ಕಾರ್ಯಕ್ರಮದಲ್ಲಿ ಆಮೀರ್ ಮಿಂಟೋಯೀ ಎಂಬ ವಿದ್ಯಾರ್ಥಿ, “ಕಾಂಗ್ರೆಸ್ ಪಕ್ಷದ ಆಡಳಿತೆಯಲ್ಲೇ ಅತ್ಯಧಿಕ ಕೋಮು ಗಲಭೆಗಳು ನಡೆದಿವೆಯಲ್ಲ’ ಎಂದು ಪ್ರಶ್ನಿಸಿದಾಗ ಖುರ್ಷಿದ್ ಅವರು “ಕಾಂಗ್ರೆಸ್ ಪಕ್ಷ ಮುಸ್ಲಿಮರ ರಕ್ತದಿಂದ ಕಳಂಕಿತವಾಗಿದೆ; ಪಕ್ಷದ ಒಬ್ಬ ನಾಯಕನಾಗಿ ನನ್ನ ಕೈಗಳು ಕೂಡ ರಕ್ತಸಿಕ್ತವಾಗಿವೆ ಎಂದು ನನಗನ್ನಿಸುತ್ತದೆ’ ಎಂದು ಹೇಳಿದರು.
“ಎಎಂಯು ಕಾಯಿದೆಯನ್ನು 1948ರಲ್ಲಿ ತಿದ್ದುಪಡಿ ಮಾಡಲಾಯಿತು. 1950ರಲ್ಲಿ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಪರಿಣಾಮವಾಗಿ ಮುಸ್ಲಿಮ್ ದಲಿತರು ಎಸ್‌ಸಿ/ಎಸ್‌ಟಿ ಕೋಟಾದಡಿ ಮೀಸಲು ವಂಚಿತರಾದರು. ಹಾಶೀಮ್‌ಪುರ, ಮಲಯಾನಾ, ಮೀರತ್, ಮುಜಫರನಗರ, ಭಾಗಲ್ಪುರ, ಮೊರಾದಾಬಾದ್, ಆಲಗಢದಲ್ಲಿ ಮುಸ್ಲಿಂ ದಂಗೆಗಳು ನಡೆದವು; ಬಾಬರೀ ಮಸೀದಿ ಧ್ವಂಸವಾಯಿತು – ಇವೆಲ್ಲವೂ ಕಾಂಗ್ರೆಸ್ ಆಳ್ವಿಕೆಯ ವೇಳೆಯೇ ನಡೆಯಿತು. ಕಾಂಗ್ರೆಸ್ ಕೈಗಳಿಗೆ ತಗಲಿರುವ ಮುಸ್ಲಿಮರ ರಕ್ತದ ಕಲೆಯನ್ನು ಹೇಗೆ ತಾನೇ ತೊಳೆಯಲು ಸಾಧ್ಯ’ ಎಂದು ವಿದ್ಯಾರ್ಥಿ ಮಿಂಟೋಯಿ ಪ್ರಶ್ನಿಸಿದರು.
ಕಾಂಗ್ರೆಸ್ ಕೈಗೆ ಮುಸ್ಲಿಮರ ರಕ್ತದ ಕಲೆ ಅಂಟಿದೆ ಎಂಬ ಸಲ್ಮಾನ್ ಖುರ್ಷಿದ್ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ, ಸಂಸದ ಸುಬ್ರಮಣಿಯನ್ ಸ್ವಾಮಿ ಅವರು, “ಕಾಂಗ್ರೆಸ್ ತನ್ನ ಪಾಪಗಳಿಗೆ ಬೆಲೆ ತೆರಬೇಕಾದ ಕಾಲ ಈಗ ಒದಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.