Advertisement
“ಭಾಗಮ್ಮಾ, ಏ ಭಾಗಮ್ಮಾ! ಇಲ್ಲಿ ಬಾರೇ… ಏನ್ ಮಾಡಾಕತ್ತಿ?… ಭಾಗಮ್ಮಾ, ಏ ಭಾಗಮ್ಮಾ’ ಅಂತ ಆಯಿ (ಅಜ್ಜಿ) ಕೂಗಿದಾಗ, ಈ ಕಡೆಯಿಂದ ನಾನು-“ಏನಾ ಆಯಿ, ಯಾಕ್ ಅಂತಾಪರಿ ಕರೀಲತಿಯಲ್ಲಾ? ಏನ್ ಕಮ್ಮಿ ಬಿತ್ತು ಹೇಳ್’… ಎನ್ನುತ್ತಾ ಆಕೆಯೆಡೆ ಹೋದೆ. “ಏನಿಲ್ಲ ಮಗಾ, ಜರಾ ಪುಟ್ಟಗೌರಿ ಧಾರಾವಾಹಿ ಹಚ್ ಕೊಡು. ನಂಗ್ ಟಿ.ವಿ. ಹಚ್ಚಾಕ್ ಬರ್ತಿಲ್ಲ’ ಅಂದಳು. “ಅದಕ್ ಅಷ್ಟೊತ್ತಿಂದ ಒಂದೇ ಸಮಾ ಕರೀಲತಿಯೇನ್…’ ಅನ್ನುತ್ತಾ, ಚಾನೆಲ್ ಹಾಕಿ ಕೊಟ್ಟೆ.
Related Articles
Advertisement
ಯಾಕಂದ್ರೆ, ಮನೆಯಲ್ಲಿ ಹೆಣ್ಣುಮಕ್ಕಳಿಲ್ಲದೇ ಇದ್ದಾಗ, ಆಯಿ ಹರಕೆ ಹೊತ್ತ ನಂತರ ಹುಟ್ಟಿದವಳು ನಾನು. ಅದಕ್ಕೆ ಆಯಿ ನನಗೆ “ಭಾಗಮ್ಮಾ’ ಅಂತ ದೇವರ ಹೆಸರನ್ನಿಟ್ಟಿದ್ದು. ಸಾಮಾನ್ಯವಾಗಿ ಅಜ್ಜಿಯಂದಿರಿಗೆ ಮೊಮ್ಮಕ್ಕಳ ಹುಟ್ಟಿದ ದಿನ ನೆನಪಿರೋದಿಲ್ಲ. ಇನ್ನು ಬರ್ಥ್ ಡೇ ಸೆಲೆಬ್ರೇಷನ್ ಅಂತೆಲ್ಲಾ ಗೊತ್ತಿರಲಿಕ್ಕಿಲ್ಲ. ಆದರೆ, ಆಯಿಗೆ ನನ್ನ ಬರ್ಥ್ಡೇ ಯಾವಾಗ ಅಂತ ಕೇಳಿದ್ರೆ, ಥಟ್ ಅಂತ ಹೇಳಿಬಿಡ್ತಾಳೆ. ಹುಟ್ಟಿದಹಬ್ಬಕ್ಕೆ ಹೊಸ ಬಟ್ಟೆ ತಗೋ ಅಂತ ದುಡ್ಡನ್ನೂ ಕೊಡುತ್ತಾಳೆ.
ಆಯಿಗೆ ವಯಸ್ಸು ಎಂಬತ್ತಾಗಿರಬಹುದು. ಆದರೂ, ಜೀವನೋತ್ಸಾಹದಲ್ಲಿ ಅವಳಿನ್ನೂ ಸಣ್ಣ ಹುಡುಗಿ. ಅವಳಿಂದ ನಾನು ಕಲಿತ ಅದೆಷ್ಟೋ ವಿಷಯಗಳನ್ನು ಯಾವ ಶಾಲೆ-ಕಾಲೇಜು, ಯುನಿವರ್ಸಿಟಿಯೂ ಹೇಳಿಕೊಟ್ಟಿಲ್ಲ. ಹಳೆಯ ಸಂಪ್ರದಾಯ, ಆಚಾರ-ವಿಚಾರ, ಪೂಜೆ-ಪುನಸ್ಕಾರ, ಅಡುಗೆ, ಭಜನೆ, ರಂಗೋಲಿ ಅಷ್ಟೇ ಅಲ್ಲ, ಬದುಕನ್ನು ಪ್ರೀತಿಸುವುದನ್ನು, ಬಂದದ್ದೆಲ್ಲವನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಸಿದ್ದೂ ಆಕೆಯೇ.
ಒಮ್ಮೊಮ್ಮೆ ಅಜ್ಜಿ-ಮೊಮ್ಮಗಳ ಹಾಗೆ, ಮತ್ತೂಮ್ಮೆ ಫ್ರೆಂಡ್ಸ್ ಹಾಗೆ ಇರುವ ನಾವು ಜಗಳ ಮಾಡಿದ್ದುಂಟು, ವಾರಗಟ್ಟಲೆ ಮಾತು ಬಿಟ್ಟಿದ್ದೂ ಉಂಟು. ಈಗ ಆಯಿಯಿಂದ ದೂರವಿರುವ ನಾನು, ಅವನ್ನೆಲ್ಲ ಬಹಳ ಮಿಸ್ ಮಾಡಿಕೊಳ್ಳುತ್ತೇನೆ. “ಭಾಗಮ್ಮಾ, ಭಾಗಮ್ಮಾ, ಬಾರವ್ವಾ ಇಲ್ಲಿ’ ಅನ್ನೋ ಆ ದನಿ ನೆನಪಾದಾಗೆಲ್ಲಾ ಮೊಬೈಲ್ ಕೈಗೆತ್ತಿಕೊಂಡು “ಮೈ ಕ್ಯಾಶಿಯರ್’ ಅನ್ನೋ ನಂಬರ್‌ಗೆ ಡಯಲ್ ಮಾಡುತ್ತೇನೆ.
ಹಾಂ, ನನ್ನ ಕ್ಯಾಶಿಯರ್ ಕೂಡಾ ಆಯಿಯೇ! ಬರುವ ಪೆನ್ಷನ್ ಹಣದಿಂದ ನನ್ನೆಲ್ಲಾ ಬೇಕು-ಬೇಡಗಳನ್ನು, ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಾಳೆ. “ಎಲ್ಲರ ಕೈಯಾಗ ದೊಡ್ ದೊಡ್ ಮೊಬೈಲ್ ಅದ, ನೀ ಒಂದ್ ತಗೋ ಅಲ’ ಅಂತ ಹಣ ಕೊಟ್ಟು, ಹೊಸ ಮೊಬೈಲ್‌ನಲ್ಲಿ ಸೆಲ್ಫಿಗೆ ಪೋಸ್ ನೀಡಿ, ಡಬ್‌ಸ್ಮ್ಯಾಶ್ ವಿಡಿಯೋಗೆ ಪಾರ್ಟ್‌ನರ್ ಆಗಿ, ಟಸ್ಸುಪುಸ್ಸು ಇಂಗ್ಲಿಷ್ ಮಾತಾಡುವ ಆಯಿಯನ್ನು ನೋಡೇ ಹೇಳಿದ್ದು ಅನಿಸುತ್ತೆ, ವಯಸ್ಸು ಎನ್ನುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ ಅಂತ! ಈ ಮಾರ್ಡನ್ ಅಜ್ಜಿ, ನೂರ್ಕಾಲ ಚೆನ್ನಾಗಿರಲಿ ಅಂತ ದೇವರಲ್ಲಿ ಬೇಡಿಕೊಳ್ತೀನಿ…
* ಭಾಗ್ಯ ಎಸ್ ಬುಳ್ಳಾ