ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಜಾಗತಿಕ ಮಟ್ಟದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಮಾಡಿದ ಸೇವೆ, ಸಾಧನೆಯನ್ನು ಮನ್ನಿಸಿ ಅಮೆರಿಕದ ವೆಲ್‌ನೆಸ್ ವಿಶ್ವವಿದ್ಯಾನಿಲಯದ ವತಿಯಿಂದ ಶನಿವಾರ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಆಚಾರ್ಯ ಪದವಿಯೊಂದಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಪದವಿ ಸ್ವೀಕರಿಸಿ ಮಾತನಾಡಿದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ನಾವೆಲ್ಲರೂ ಇಂದು ಸುಮನಸರಾಗಬೇಕು. ವಿಶ್ವ ಕಲ್ಯಾಣವೇ ನಮ್ಮ ಗುರಿಯಾಗಬೇಕು ಸಮಸ್ತ ಮಾನವ ಕಲ್ಯಾಣ ಹಾಗೂ ಸಂತೋಷವೇ ಎಲ್ಲ ಸೇವೆಗಳ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಆನ್‌ಲೈನ್ ಮೂಲಕ ಹೆಗ್ಗಡೆಯವರನ್ನು ಅಭಿನಂದಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರಿನ ಕೃಷಿ ವಿಜ್ಞಾನ ವಿ.ವಿ.ಯ ವಿಜ್ಞಾನಿ ಡಾ| ಬಿ.ಎನ್. ಸತ್ಯನಾರಾಯಣ, ಬೆಂಗಳೂರು ವಿ.ವಿ.ಯ ಉಪಕುಲಪತಿ ಡಾ| ಕೆ.ಆರ್. ವೇಣುಗೋಪಾಲ್, ಮಣಿಪಾಲದ ಮಾಹೆ ವಿ.ವಿ.ಯ ಉಪಕುಲಪತಿ ಎಂ.ಡಿ. ವೆಂಕಟೇಶ್, ಸುರತ್ಕಲ್ ಎನ್‌ಐಟಿಕೆಯ ಪ್ರೊ| ಶ್ರೀಪತಿ ಆಚಾರ್ಯ ಶುಭ ಹಾರೈಸಿದರು. ಇದೇ ಸಂದರ್ಭ ಬ್ರಹ್ಮಶ್ರೀ ಪತ್ರಿಜಿ,ಸುಬಾ ಕೋಟಾ ಮತ್ತು ಆರ್ಯಾಂಬತ್ ಜನಾರ್ದನ್ ಅವರಿಗೆ ಕೂಡ ಡಾಕ್ಟರೇಟ್ ಪದವಿ ನೀಡಲಾಯಿತು. ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್‌ಉಪಸ್ಥಿತರಿದ್ದರು.
ಅಮೆರಿಕದ ವೇದಿಕ್ ವೆಲ್‌ನೆಸ್ ವಿ.ವಿ.ಯ ಅಧ್ಯಕ್ಷ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪಾಧ್ಯಕ್ಷ ರಶ್ಮಿ ಕೃಷ್ಣಮೂರ್ತಿ ವಂದಿಸಿದರು.