ಮುಂಬಯಿ: ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಶಿವಸೇನೆ ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳಿ ಎಂದು ಶಿವಸೇನಾದ ಬಂಡಾಯ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಆದರೆ ನೀವು (ಬಂಡಾಯ ಶಾಸಕರು) ಬೇಕಾದರೆ ಬಿಜೆಪಿ ಜತೆ ವಿಲೀನವಾಗಿ, ಶಿವಸೇನೆ ನಮ್ಮ ಪಕ್ಷವಾಗಿಯೇ ಉಳಿಯಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ, ಶಿವಸೇನಾದ ಸಂಸದ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಕಾಗದ ರಹಿತ ಆಡಳಿತ ಯೋಜನೆ ಹೆಸರಲ್ಲಿ 254 ಕೋಟಿ ರೂ. ಹಗರಣ: ರಮೇಶ್ ಬಾಬು ಆರೋಪ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾವತ್ ಗುರುವಾರ (ಜೂನ್ 23) ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆಗೆ ಸವಾಲೊಡ್ಡಿದ್ದು, ಶಿವಸೇನೆಗೆ ಮರಳುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ರಾವತ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಶಾಸಕರು ಬಹುಮತ ಸಾಬೀತುಪಡಿಸಲು ವಿಧಾನಸಭೆಗೆ ಬರಲಿ, ನಂತರ ನಾವು ನೋಡುತ್ತೇವೆ. ಬಂಡಾಯದಿಂದ ಹೊರ ಹೋಗಿರುವ ಶಾಸಕರಿಗೆ ಮಹಾರಾಷ್ಟ್ರದಲ್ಲಿ ತಿರುಗಾಡಲು ಎಷ್ಟು ಕಷ್ಟವಾಗಬಹುದು ಎಂಬುದನ್ನು ತಿಳಿದುಕೊಳ್ಳಲಿ ಎಂದು ಎನ್ ಡಿಟಿವಿ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಬಂಡಾಯ ಶಾಸಕರ ಜೊತೆಗಿನ ಮಾತುಕತೆ ಮುಂದುವರಿದಿದೆ. ಅವರೆಲ್ಲಾ ನಮ್ಮ ಸ್ನೇಹಿತರು. ಅವರ ಮೇಲಿನ ಒತ್ತಡ ಏನೆಂದು ನಮಗೆ ತಿಳಿದಿಲ್ಲ. ಪಕ್ಷ ಮತ್ತು ರಾಜ್ಯ ಉದ್ಧವ್ ಠಾಕ್ರೆ ಜತೆಗಿದೆ. ಕೆಲವು ಶಾಸಕರು ಪಕ್ಷ ತೊರೆದ ಕೂಡಲೇ ಶಿವಸೇನಾ ಪಕ್ಷವೇ ಹೋಯಿತು ಎಂದರ್ಥವಲ್ಲ ಎಂದು ರಾವತ್ ತಿರುಗೇಟು ನೀಡಿದ್ದಾರೆ.