ಉಳ್ಳಾಲ: ರಕ್ತ ಕ್ಯಾನ್ಸರ್ (ಮಲ್ಟಿಪಲ್ ಮೈಲೋಮಾ) ರೋಗಿಗೆ ಯಶಸ್ವಿ ಅಸ್ಥಿಮಜ್ಜೆ ಕಸಿ ವಿಧಾನವನ್ನು ಪ್ರಥಮ ಬಾರಿಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲೀಲಾ ನಾರಾಯಣ ಶೆಟ್ಟಿ ಕ್ಯಾನ್ಸರ್ ಕೇಂದ್ರದ ಮೆಡಿಕಲ್ ಆಂಕೊಲಾಜಿ ತಜ್ಞ ಡಾ| ವಿಜೀತ್ ಶೆಟ್ಟಿ ಹಾಗೂ ಅವರ ನೇತೃತ್ವದ ವೈದ್ಯಕೀಯ ತಂಡ ಅಟೋಲೋಗಸ್ ಕಾಂಡಕೋಶ ಕಸಿಯನ್ನು ಯಶಸ್ವಿಯಾಗಿ ನಡೆಸಿತು.
ಬೆಳ್ತಂಗಡಿ ತಾಲೂಕಿನ 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೂರು ವರ್ಷಗಳಿಂದ ತೀವ್ರ ಬೆನ್ನುನೋವು ಮತ್ತು ರಕ್ತಹೀನತೆ ಯಿಂದ ಬಳಲು ತ್ತಿದ್ದು, ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಹಲವು ಬಾರಿ ತಪಾಸಣೆ ನಡೆಸಿದಾಗ ಅವರಿಗೆ ರಕ್ತ ಕ್ಯಾನ್ಸರ್(ಮಲ್ಟಿಪಲ್ ಮೈಲೋಮಾ) ಕಾಯಿಲೆ ಇರುವು ದಾಗಿ ಪತ್ತೆಯಾಯಿತು. ನಿಟ್ಟೆ ವಿವಿ ಸಹ ಕುಲಾಧಿಪತಿ ಪ್ರೊ| ಡಾ| ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಅಟೊಲೋಗಸ್ ಎಂಬುದು ಮಲ್ಟಿಪಲ್ ಮೈಲೋಮಾ ಕಾಯಿಲೆಗೆ ಸುಧಾರಿತ ಚಿಕಿತ್ಸಾ ಕಾರ್ಯ ವಿಧಾನವಾಗಿದೆ. ಇಂತಹ ಸುಧಾರಿತ ಕಾರ್ಯವಿಧಾನ ಬೆಂಗಳೂರಿನ ಕ್ಯಾನ್ಸರ್ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದು, ಈಗ ನಮ್ಮ ಆಸ್ಪತ್ರೆಯಲ್ಲಿಯೂ ಈ ಸುಧಾರಿತ ಚಿಕಿತ್ಸಾ ವಿಧಾನ ಕಂಡುಹಿಡಿದಿರುವುದು ಶ್ಲಾಘನೀಯ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಡಾ| ಸತೀಶ್ ಕುಮಾರ್ ಭಂಡಾರಿ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಪ್ರೊ| ಡಾ| ಪಿ.ಎಸ್. ಪ್ರಕಾಶ್, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹಿರೇಮ, ನಿರ್ವಹಣೆ ವೈಸ್‌ಡಿನ್ ಡಾ| ಜಯಪ್ರಕಾಶ್ ಶೆಟ್ಟಿ, ಕ್ಷೇಮದ ರೇಡಿಯೇಷನ್ ಅಂಕೊಲಾಜಿಯ ಮುಖ್ಯಸ್ಥ ಪ್ರೊ| ಡಾ| ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಅಟೊಲೋಗಸ್ ಕಾರ್ಯವಿಧಾನದಲ್ಲಿ ಮೊದಲ ಹಂತದಲ್ಲಿ ಬಾಹ್ಯ ರಕ್ತದ ಪೆರಿಫೆರಲ್ ಕಾಂಡಕೋಶಗಳನ್ನು ಸಂಗ್ರಹಿಸಿ, ಎರಡನೆ ಹಂತದಲ್ಲಿ ರೋಗಿಯಲ್ಲಿನ ಮಾರಣಾಂತಿಕ ಕೋಶಗಳನ್ನು ನಿರ್ಮೂಲನೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಕೀಮೊ ಥೆರಪಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಮೂರನೇ ಹಂತದಲ್ಲಿ ರೋಗಿಯಲ್ಲಿನ ಮಾರ
ಣಾಂತಿಕ ಕೋಶಗಳು ಮತ್ತೆ ಸಾಮಾನ್ಯ ಕೋಶಗಳಾಗಿ ಪರಿವರ್ತಿಸುವಂತೆ ನೋಡಿ ಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ರೋಗಿಗೆ ಸೋಂಕು ತಗುಲದ ಹಾಗೇ ಅತ್ಯಂತ ಸೂಕ್ಷ್ಮ ನಿಗಾ ಘಟಕದಲ್ಲಿ ಇಡಲಾಗುತ್ತದೆ. ಇಂತಹ ಯಶಸ್ವಿ ಚಿಕಿತ್ಸೆಗೆ ನಮ್ಮ ವೈದ್ಯರ ತಂಡದ ಸಹಕಾರದಿಂದ ಸಾಧ್ಯವಾಗಿದೆ.
ಡಾ| ವಿಜೀತ್ ಶೆಟ್ಟಿ , ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಆಂಕೊಲಾಜಿ ತಜ್ಞ