Advertisement

ಒಡವೆ, ನೀನೆಲ್ಲಿ ಗೆ ಕಧ್ದೋಡುವೆ?

12:36 AM May 18, 2017 | Karthik A |

ಇದು ಮದ್ವೆ ಸೀಸನ್ನು. ಮದ್ವೆ ಅಂದಮೇಲೆ ಅದ್ದೂರಿ, ಆಡಂಬರ ಇದ್ದಿದ್ದೇ. ಹೆಣ್ಮಕ್ಕಳಿಗಂತೂ ರೇಷ್ಮೆ ಸೀರೆ ಮೇಲೆ ಮೋಹ, ಒಡವೆಗಳ ಮೇಲಂತೂ ವಿಪರೀತ ವ್ಯಾಮೋಹ. ಮದ್ವೆಗೂ, ರೇಷ್ಮೆ ಸೀರೆ, ಒಡವೆಗೂ ಅವಿನಾಭಾವ ನಂಟು. ರೇಷ್ಮೆ ಸೀರೆ ಉಟ್ಟುಕೊಂಡು, ಬಗೆಬಗೆಯ ಒಡವೆ ಧರಿಸಿಕೊಂಡು ಮದ್ವೆ ಮನೆಯಲ್ಲಿ ಓಡಾಡೋದಂದ್ರೆ ಮಹಿಳೆಯರಿಗೆ ಅದೇನೋ ಜೋಶ್‌. ಆದರೆ, ಸಾಮಾನ್ಯವಾಗಿ ಮದ್ವೆ ಛತ್ರಗಳಲ್ಲಿ ನಮ್ಮ ಅಮೂಲ್ಯ, ದುಬಾರಿ ವಸ್ತುಗಳು ಕಳವು ಆಗೋದು ಹೆಚ್ಚು. ಇಂಥ ವೇಳೆ ಒಡವೆಯಂಥ ಅಮೂಲ್ಯ ವಸ್ತುಗಳ ರಕ್ಷಣೆ ಹೇಗೆ? ಕಳ್ಳರ ಪಾಲಾಗದಂತೆ ಏನು ಮಾಡಬೇಕು? ಇಲ್ಲಿವೆ ಕೆಲವು ಮುಂಜಾಗ್ರತಾ ಮಾರ್ಗಗಳು…

Advertisement

ನಿಮ್ಮ ಮನೆಯದೇ ಮದ್ವೆ ಎಂದಾದಲ್ಲಿ, ಛತ್ರಕ್ಕೆ ನೀವು ಕೊಂಡೊಯ್ಯುವ ಅಮೂಲ್ಯ ವಸ್ತುಗಳ ಮತ್ತು ಇತರ ವಸ್ತುಗಳ ಪ್ರತ್ಯೇಕ ಪಟ್ಟಿಮಾಡಿ. ಬೆಳ್ಳಿತಟ್ಟೆ, ಕಲಶ, ಪೂಜಾಪರಿಕರಗಳು, ಸೀರೆ, ಒಡವೆಗಳು ಎಲ್ಲವನ್ನೂ, ನಿಮಗೆ ನೀಡಿರುವ ಕೊಠಡಿಯಲ್ಲಿ ಇರಿಸಿ. ಅದಕ್ಕೆ ನಿಮ್ಮದೇ ಆದ ಬೇರೆ ಬೀಗ ಹಾಕಿಕೊಳ್ಳಿ. ಬೀಗದ ಕೈ ನಿಮ್ಮ ಮನೆ ಸದಸ್ಯರಲ್ಲಿ ಅಥವಾ ಆಪ್ತರ ಕೈಯಲ್ಲಿ ಮಾತ್ರ ಇರಬೇಕು. ನೀವು ಊಟಕ್ಕೋ, ಬಾತ್‌ ರೂಂಗೋ ಹೋದಾಗ ನಿಮ್ಮ ಹಣದ ಅಥವಾ ಒಡವೆಯ ಬ್ಯಾಗನ್ನು ಆಪ್ತರ ಬಳಿ ಮಾತ್ರ ಕೊಡಿ.

ಕೊಠಡಿಯ ಬಳಿ ಅಥವಾ ಮಂಟಪದ ಸುತ್ತ ಅತ್ತಿತ್ತ ಸುಳಿದಾಡುವ ಅಪರಿಚಿತರ ಮೇಲೆ ನಿಗಾ ವಹಿಸಿ. ಅಂಥವರು ಕೊಠಡಿಯೊಳಗೆ ನುಸುಳದಂತೆ ಎಚ್ಚರ ವಹಿಸಲು ನಿಮ್ಮ ಆಪ್ತ ಬಂಧುಗಳಿಗೆ ತಿಳಿಸಿ.

ಸೀರೆ, ಒಡವೆಗಳನ್ನು ಬದಲಿಸುವಾಗ ಎಚ್ಚರ ಅತ್ಯಗತ್ಯ. ‘ನಮ್ಮದೇ ಕೊಠಡಿ’ ಎಂದು, ಉಟ್ಟ ಸೀರೆಯನ್ನು ಎಲ್ಲೆಂದರಲ್ಲಿ ಇಡಬೇಡಿ. ಮೊದಲು ಉಟ್ಟ ಸೀರೆ, ಆಭರಣಗಳನ್ನು ಜೋಪಾನವಾಗಿ ತೆಗೆದಿರಿಸಿ. ನಮ್ಮಲ್ಲಿ ಸೀರೆ ಕಳ್ಳಿಯರು, ಒಡವೆ ಕಳ್ಳಿಯರಿಗೇನೂ ಕಮ್ಮಿ ಇಲ್ಲ. ಅಷ್ಟೇ ಅಲ್ಲ ; ಕೆಲವೊಮ್ಮೆ ಅವಸರದಲ್ಲಿ ಸೀರೆಯು ಬೇರೆಯವರ ಬ್ಯಾಗ್‌ ಸೇರುವ ಸಾಧ್ಯತೆಯೂ ಇಲ್ಲದಿಲ್ಲ. ಈ ಬಗ್ಗೆ ಜಾಗರೂಕತೆ ಅಗತ್ಯ.

ಸ್ನಾನ ಮಾಡುವಾಗ, ಮುಖ ತೊಳೆಯುವಾಗ ಒಡವೆಗಳನ್ನು ಅಲ್ಲಿಯೇ ಬಿಚ್ಚಿಡುವುದು ಬಹಳಷ್ಟು ಅಪಾಯಕಾರಿ. ಅಲ್ಲೇ ಮರೆತುಬಿಡುವ ಸಂಭವವೂ ಜಾಸ್ತಿ. ಕೆಲವೊಮ್ಮೆ ಆಕಸ್ಮಿಕವಾಗಿ ಬಿದ್ದು ಕಳೆದುಹೋಗುವ ಸಾಧ್ಯತೆಯೂ ಇಲ್ಲದಿಲ್ಲ. ಒಡವೆಗಳನ್ನು ಆಪ್ತರ ಕೈಯಲ್ಲಿ ಕೊಟ್ಟೋ, ಸುಭದ್ರವಾದ ಜಾಗದಲ್ಲಿ ಇಟ್ಟೋ ಸ್ನಾನಕ್ಕೆ ತೆರಳಿ.

Advertisement

ಆಭರಣಗಳನ್ನು ಧರಿಸುವಾಗ ಕೊಂಡಿಗಳು ಸಡಿಲವಾಗಿದೆಯೇ, ಸವೆದಿದೆಯೇ ಎಂದು ಪರಿಶೀಲಿಸಿಯೇ ಧರಿಸುವುದು ಒಳಿತು. ಕೆಲವೊಮ್ಮೆ ಕೊಂಡಿ ಕಳಚಿ ಬಿದ್ದುಹೋಗುವ ಸಾಧ್ಯತೆಯೂ ಇರುತ್ತದೆ.

ಮಕ್ಕಳಿಗೆ ಒಡವೆಗಳನ್ನು ಹಾಕಿದಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಒಂಟಿಯಾಗಿ ನಿಮ್ಮ ಪುಟಾಣಿಗಳನ್ನು ಹೊರಕಳಿಸಬೇಡಿ. ಒಡವೆಗಳನ್ನು ತೆಗೆಯುವುದು. ಹಾಕುವುದು ಇತ್ಯಾದಿ ಮಾಡದಂತೆ ಮಕ್ಕಳಿಗೆ ತಿಳಿಹೇಳಿ. ಮಕ್ಕಳು ತೀರಾ ಕೀಟಲೆಯ ಸ್ವಭಾವದವರಾಗಿದ್ದರೆ ಕೃತಕ ಆಭರಣಗಳನ್ನು ಹಾಕುವುದೇ ಉತ್ತಮ.

ಮದ್ವೆ ಹಾಲ್‌ ಖಾಲಿ ಮಾಡಿಕೊಂಡು ತೆರಳುವ ಮುನ್ನ, ಮತ್ತೂಮ್ಮೆ, ಮಗದೊಮ್ಮೆ ಕೊಠಡಿಯನ್ನು ಕೂಲಂಕಷವಾಗಿ ಪರಿಶೀಲಿಸಿ. ಯಾರದ್ದಾದರೂ ಒಡವೆ, ವಸ್ತ್ರಗಳು ಬಾಕಿಯಾಗಿದ್ದಲ್ಲಿ, ನಿಮ್ಮ ಸಂಬಂಧಿಕರಲ್ಲಿ ವಿಚಾರಿಸಿ ಕಳುಹಿಸಿಕೊಡುವ ಹೊಣೆ ನಿಮ್ಮದು.

ಇನ್ನು, ನೀವು ಆರಿಸಿಕೊಂಡಿರುವ ಮದ್ವೆ ಹಾಲ್‌ನಲ್ಲಿ ಸಿಸಿ ಟಿವಿ ಕ್ಯಾಮೆರಾ ಇದ್ದರೆ ಇನ್ನೂ ಒಳ್ಳೆಯದು. ಇದು ಮದ್ವೆ ಸೀಸನ್ನು. ಮದ್ವೆಗೆ ಅಂತ ಹೋದ್ರೆ, ಅಲ್ಲಿ ನಮ್ಮ ಬಂಗಾರ, ಸೀರೆಯಂಥ ಅಮೂಲ್ಯ ವಸ್ತುಗಳು ಕಳುವು ಆಗಬಹುದು…

– ರಾಜೇಶ್ವರಿ ಜಯಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next