ಬೆಂಗಳೂರು: ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ರೈಲ್ವೇ ಸಚಿವ ಸಿ.ಕೆ.ಜಾಫರ್ ಷರೀಫ್(85) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
1933 ನವೆಂಬರ್ 3 ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ್ದರು. ಈಗಾಗಲೇ ಅವರ ಪತ್ನಿ ನಿಧನಹೊಂದಿದ್ದಾರೆ. ಇಬ್ಬರು ಪುತ್ರರೂ ಇಹಲೋಕ ತ್ಯಜಿಸಿದ್ದಾರೆ.
ಪಿ.ವಿ.ನರಸಿಂಹರಾವ್ ಅವರ ಸಂಪುಟದಲ್ಲಿ ರೈಲ್ವೇ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 1991 ರಿಂದ 1995 ರ ಜೂನ್ ವರೆಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 6 ಬಾರಿ ಆಯ್ಕೆಯಾದ ಖ್ಯಾತಿ ಷರೀಫ್ ಅವರದ್ದು, 1977 ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಅವರು 2009 ರಲ್ಲಿ ಸೋಲನ್ನಪ್ಪಿದ್ದರು, ಆ ಬಳಿಕ ರಾಜಕೀಯ ರಂಗದಲ್ಲಿ ಸ್ವಲ್ಪ ಹಿನ್ನಲೆಗೆ ಸರಿದಿದ್ದರು.
ರೈಲ್ವೇ ಗೇಜ್ ಪರಿವರ್ತನೆಯಲ್ಲಿ ಮಹತ್ವದ ಬದಲಾವಣೆ ಮಾಡಿ ಬ್ರಾಡ್‌ಗೇಜ್‌ಗಳನ್ನು ನಿರ್ಮಿಸಿದ ಹಿರಿಮೆ ಜಾಫರ್ ಷರೀಫ್ ಅವರದ್ದು. ಬೆಂಗಳೂರಿನಲ್ಲಿ ರೈಲು ಗಾಲಿ ತಯಾರಿಕ ಘಟಕ ನಿರ್ಮಾಣವಾಗುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.