ಹೊಸದಿಲ್ಲಿ: “ಆಧಾರ್‌ನಿಂದಾಗಿ ದೇಶದ ನಾಗರಿಕರ ಮೂಲಭೂತ ಹಕ್ಕುಗಳೇ ಸಾಯಬಹುದು. ಅದೊಂದು ದೊಡ್ಡ ಇಲೆಕ್ಟ್ರಾನಿಕ್ ಜಾಲ ಇದ್ದಂತೆ. ಅದರ ಮೂಲಕ ನಾಗರಿಕರ ಮೇಲೆ ನಿಗಾ ಇರಿಸಲು ಪ್ರಯತ್ನಿಸಲಾಗುತ್ತದೆ’. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರ ಪರ ವಾದ ಮಂಡಿಸಿದ ಖ್ಯಾತ ನ್ಯಾಯವಾದಿ ಶ್ಯಾಮ್ ದಿವಾನ್ ಈ ರೀತಿಯ ವಾದ ಮಂಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ಆಧಾರ್ ಲಿಂಕ್ ಮಾಡುವ ಬಗ್ಗೆ ಅಂತಿಮ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಗಳಾದ ಎ.ಎಂ.ಖಾನ್ವಿಲ್ಕರ್, ಆದರ್ಶ ಕುಮಾರ್ ಸಿಕ್ರಿ, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಪೀಠದಲ್ಲಿರುವ ಇತರ ನ್ಯಾಯಮೂರ್ತಿಗಳು.
ವಿಚಾರಣೆಯ ಒಂದು ಹಂತದಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸರಕಾರ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯ ಮಾಡಿದರೆ ಹೇಗಿರುತ್ತದೆ ಎಂದು ನ್ಯಾ| ಡಿ.ವೈ.ಚಂದ್ರಚೂಡ್ ಪ್ರಶ್ನೆ ಮಾಡಿ ದಾಗ ಶ್ಯಾಮ್ ದಿವಾನ್ ಅವರು “ಸಮಾಜ ದಲ್ಲಿರುವ ಎಲ್ಲರೂ ಅದನ್ನು ಹೊಂದಲೇ ಬೇಕಾಗುತ್ತದೆ. ಆದರೆ ಒತ್ತಡದಿಂದ ಯೋಜನೆ ಜಾರಿಗೊಳಿಸಿದರೆ ಅದು ನಿಗಾ ಇರಿಸುವ ಸರಕಾರವಾಗುತ್ತದೆ ಮತ್ತು ನಿರಂಕುಶ ಪ್ರಭುತ್ವವಾಗುತ್ತದೆ’ ಎಂದರು ಶ್ಯಾಮ್ ದಿವಾನ್. ಜನರಿಗಾಗಿ ಇದ್ದ ಸಂವಿಧಾನ ಸರಕಾರದ ಸಂವಿಧಾನ ವಾಗುತ್ತದೆ ಎಂದರು. ವಾದ ಮಂಡನೆ ಗುರುವಾರವೂ ಮುಂದುವರಿಯಲಿದೆ.
ಸಿಜೆಐ- ನ್ಯಾಯಮೂರ್ತಿಗಳ ಭೇಟಿ ಇಂದು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ನಾಲ್ವರು ನ್ಯಾಯಮೂರ್ತಿಗಳ ಭೇಟಿ ಬುಧವಾರ ನಡೆಯಲಿಲ್ಲ. ನ್ಯಾ| ಜಸ್ತಿ ಚಲಮೇಶ್ವರ್ ಅನಾರೋಗ್ಯದ ನಿಮಿತ್ತ ಸುಪ್ರೀಂ ಕೋರ್ಟ್‌ಗೆ ಬಂದಿರಲಿಲ್ಲ. ಹೀಗಾಗಿ, ಭೇಟಿ ಗುರುವಾರಕ್ಕೆ ಮುಂದೂಡಲಾಗಿದೆ.