Advertisement

ಬಿಜೆಪಿ ಅಪಪ್ರಚಾರಕ್ಕೆ ಸಂಘಟಿತ ಪ್ರತ್ಯುತ್ತರ

01:00 PM Mar 06, 2017 | Team Udayavani |

ಹುಬ್ಬಳ್ಳಿ: ರಾಜ್ಯ ಸರಕಾರ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಅಪಪ್ರಚಾರಕ್ಕೆ ನಾವು ಸಂಘಟಿತ ಪ್ರತ್ಯುತ್ತರ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್‌ ಹೇಳಿದರು. ನಗರದಲ್ಲಿ ರವಿವಾರ ನಡೆದ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.

Advertisement

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಆಡಳಿತ ನೀಡಲಾಗುತ್ತಿದೆ. ಆದರೆ ಬಿಜೆಪಿಯವರು ವಿನಾಕಾರಣ ರಾಜ್ಯ ಸರಕಾರದ ವಿರುದ್ಧ ಆರೋಪಕ್ಕೆ ಮುಂದಾಗಿದೆ. ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ ಹಾಗೂ ದೇಶಕ್ಕಾಗಿ ಕಾಂಗ್ರೆಸ್‌ ಸಾಕಷ್ಟು ತ್ಯಾಗ ಮಾಡಿದೆ. ಇವರೇನು ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡಬೇಕಾಗಿದೆ ಎಂದರು. 

ಇಷ್ಟು ದಿನಗಳ ಕಾಲ ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಕೆಲವರು, ಅಧಿಕಾರ ಬಂದ ಮೇಲೆ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಭಗತಸಿಂಗ್‌, ಸುಖದೇವಸಿಂಗ್‌, ಚಂದ್ರಶೇಖರ ಆಜಾದ ಇವರಿಗೆ ಅವರಿಗೆ ಸಂಬಂಧವೇ ಇಲ್ಲ. ಆದರೆ ಅವರೆಲ್ಲರೂ ನಮ್ಮವರೇ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ತಿರುಗುತ್ತಾರೆ.

ಬಿಜೆಪಿಯವರು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿರೋಧಿಗಳಾಗಿದ್ದು, ಅವರೆಂದೂ ಮುಸ್ಲಿಂರನ್ನು ನಂಬುವುದಿಲ್ಲ ಎಂದರು. ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತುರವ ಎಲ್ಲ ಷಡ್ಯಂತ್ರಗಳನ್ನು ಬಿಜೆಪಿಯವರು ನಡೆಸುತ್ತಿದ್ದಾರೆ. ಇದಕ್ಕೆ ನಾವೆಲ್ಲ ಸಂಘಟಿತ ಉತ್ತರ ನೀಡೋಣ. 

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರಕಾರ ಮಾಡಿರುವ ಸಾಧನೆ ಹಾಗೂ ಅಲ್ಪ ಸಂಖ್ಯಾತರಿಗೆ ನೀಡಿರುವ ಸೌಲಭ್ಯಗಳ ಕುರಿತು ಮನೆ-ಮನೆಗೆ ತೆರಳಿ ಪ್ರಚಾರ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿ. ಒಂದು ವರ್ಷದಲ್ಲಿ ಚುನಾವಣೆ ಬರಲಿದ್ದು ಅಷ್ಟರಲ್ಲಿ ಎಲ್ಲೆಡೆ ಪಕ್ಷದ ಸಂಘಟನೆ ಯಶಸ್ವಿಯಾಗಬೇಕು ಎಂದರು. 

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ನಾಲ್ಕು ವರ್ಷದಲ್ಲಿ ನೀರಾವರಿಗಾಗಿ ಸುಮಾರು 60 ಸಾವಿರ ಕೋಟಿ ಹಣ ಬಳಕೆ ಮಾಡಿದೆ. 1 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. ಒಂದು ಲಕ್ಷ ಕೃಷಿ ಹೊಂಡ ನಿರ್ಮಾಣದ ಗುರಿ ಹೊಂದಲಾಗಿದೆ, ರಾಜ್ಯದಲ್ಲಿ ನರೇಗಾ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದರಿಂದ ಇಂದು ಸಾವಿರಾರು ರೈತರು ಉದ್ಯೋಗ ಕಲ್ಪಿಸಿಕೊಂಡಿದ್ದಾರೆ.

ಪಕ್ಷದ ಕಾರ್ಯಕ್ರಮ, ಯೋಜನೆಗಳ ಕುರಿತು ಹೆಚ್ಚು ಪ್ರಚಾರ ಮಾಡಿ, ಇದಕ್ಕೆ ಬೇಕಾದರೆ ಎಲ್ಲ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಿ ಎಂದರು. ಯುವ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಘಟಕಗಳಿದ್ದು ಅವುಗಳಿಗೆ ಉತ್ತೇಜನ ನೀಡಬೇಕಾಗಿದೆ.

ಆದರೆ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‌ನಲ್ಲಿಯೇ 5-6 ತಂಡಗಳಾಗಿವೆ. ಒಬ್ಬರನ್ನು ಕಂಡರೇ ಮತ್ತೂಬ್ಬರಿಗೆ ಆಗುವುದಿಲ್ಲ. ಈ ರೀತಿ ಗೊಂದಲಗಳಿಂದ ಸಂಘಟನೆಯಲ್ಲಿ ಹಿನ್ನೆಡೆಯಾಗುತ್ತಿದೆ. ಅಂದಿನ ಯುವ ಕಾಂಗ್ರೆಸ್‌ಗೂ ಇಂದಿನ ಯುವ ಕಾಂಗ್ರೆಸ್‌ ಗೂ ಅಜಗಜಾಂತರ ವ್ಯತ್ಯಾಸವಿದೆ. ಆದ್ದರಿಂದ ಕಾರ್ಯಾಧ್ಯಕ್ಷರು ಇತ್ತ ಗಮನ ಹರಿಸಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದರು.

ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಸಯೈದ್‌ ಅಹ್ಮದ್‌ ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ ಮಾತನಾಡಿದರು. ಕಾಂಗ್ರೆಸ್‌ ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಎಂ.ಖಾದರ್‌, ಪ್ರೊ| ಐ.ಜಿ ಸನದಿ, ಎ.ಎಂ. ಹಿಂಡಸಗೇರಿ, ಡಾ| ಮಹೇಶ ನಾಲವಾಡ, ದೇವಕಿ ಯೋಗಾನಂದ, ದಾಕ್ಷಾಯಿಣಿ ಬಸವರಾಜ, ಇಸ್ಮಾಯಿಲ್‌ ತಮಟಗಾರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next