Advertisement

ಶಾಲಾ ಆರಂಭೋತ್ಸವ ವಿಶೇಷವಾಗಿ ಆಯೋಜಿಸಿ

11:01 AM May 26, 2018 | Team Udayavani |

ಪುತ್ತೂರು: ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಲಿದ್ದು, ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರು ಪ್ರಮುಖ ಕಾರಣಕರ್ತರಾಗಬೇಕು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌. ಹೇಳಿದರು. ಸಂತ ವಿಕ್ಟರನ ಪ್ರೌಢಶಾಲಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಪ್ರಾಥಮಿಕ ಶಾಲಾ ಮುಖ್ಯಸ್ಥರ ಸಭೆಯನ್ನು
ಉದ್ದೇಶಿಸಿ ಅವರು ಮಾತನಾಡಿದರು.

Advertisement

2018-19ನೇ ಸಾಲಿನ ಶೈಕ್ಷಣಿಕ ತರಗತಿಗಳು ಮೇ 28ರಂದು ಆರಂಭವಾಗಲಿವೆ. ಮೇ 29ರಂದು ಆರಂಭೋತ್ಸವವನ್ನು ಎಲ್ಲ ಶಾಲೆಗಳಲ್ಲಿ ವ್ಯವಸ್ಥಿತವಾಗಿ ವಿಶೇಷವಾಗಿ ನಡೆಸಬೇಕು. ಹೊಸತನದೊಂದಿಗೆ ಆರಂಭವಾಗುವ ಶೈಕ್ಷಣಿಕ ವರ್ಷವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಾಲೆಗಳಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ವರದಿಗಳನ್ನು ಕಾಲ ಕಾಲಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಬೇಕು. ಶಿಕ್ಷಕರು ತಮ್ಮ ವೈಯಕ್ತಿಕ ವಿಚಾರಗಳಿಗೇ ಆದ್ಯತೆ ನೀಡದೆ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಅವರು ಸೂಚನೆ ನೀಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್‌ ಕುಮಾರ್‌ ಮಾತನಾಡಿ, ಬಿಸಿಯೂಟ ಯೋಜನೆ ಕುರಿತು ಇಲಾಖೆಯ ನಿಯಮಗಳ ಮಾಹಿತಿ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ತಾಲೂಕು ಕಾರ್ಯದರ್ಶಿ ಮಾಮಚ್ಚನ್‌ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಕುಕ್ಕ ಸ್ವಾಗತಿಸಿ, ಬಿಆರ್‌ಪಿ ದಿನೇಶ್‌ ಗೌಡ ವಂದಿಸಿದರು. ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರು, ಕ್ಲಸ್ಟರ್‌ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜನಪ್ರತಿನಿಧಿಗಳಿಗೆ ಬೇಡ 
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿಷ್ಣು ಪ್ರಸಾದ ಮಾತನಾಡಿ, ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಯ ಹಿನ್ನೆಲೆಯಲ್ಲಿ ಜೂ. 15ರ ತನಕ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಾಲಾ ಆರಂಭೋತ್ಸವ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತಿಲ್ಲ ಎಂದು ತಿಳಿಸಿದರು. ಶಿಕ್ಷಣ ಇಲಾಖೆಯ ನಿಯಮ, ಸುತ್ತೋಲೆಗಳು, ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಅನುಸರಿಸಬೇಕಾದ ಕಡ್ಡಾಯ ನಿಯಮಗಳನ್ನು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next