ಮಾನ್ವಿ: ಭಾರತೀಯ ಜನತಾ ಪಕ್ಷವನ್ನು ಕೆಳಮಟ್ಟದಿಂದ ಸದೃಢವಾಗಿ ಸಂಘಟಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನಾಗರತ್ನ ಕುಪ್ಪಿ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಮಟ್ಟದ ಸಶಕ್ತೀಕರಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಯಾವುದೇ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಕಾರ್ಯಕರ್ತರು ತಮ್ಮ ಬೂತ್‌ಗಳಲ್ಲಿ ಮತದಾರರನ್ನು ಬಿಜೆಪಿ ಪರ ಸಂಘಟಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಧ್ವಜ ಹಾರಾಡಬೇಕು ಎಂದರು.
ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 264 ಬೂತ್‌ಗಳಿವೆ. ಪ್ರತಿ ಬೂತ್‌ಗಳಲ್ಲಿ ಐದು ಜನ ಸಮರ್ಥ ಹಾಗೂ 15 ಜನ ಸಾಮಾನ್ಯ ಕಾರ್ಯಕರ್ತರೆಂದು ನೇಮಕ ಮಾಡಲಾಗಿದೆ. ಪ್ರಾಮಾಣಿಕ ಪ್ರಯತ್ನದ ಮೂಲಕ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಪ್ರತಿ ಬೂತ್‌ನಲ್ಲಿ 300 ಮತಗಳನ್ನು ಪಡೆಯಬೇಕು. ಅಂದಾಗ ಮಾತ್ರ ಬಿಜೆಪಿ ಅಭ್ಯರ್ಥಿಗಳ ಗೆಲುವು ಸಾಧ್ಯ ಎಂದರು.
ದೇಶದಲ್ಲಿ ಈಗಾಗಲೇ ಬಿಜೆಪಿ 19 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಕರ್ನಾಟಕ ಚುನಾವಣೆಗೂ ಮುಂಚೆ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಬಿಜೆಪಿ ಗೆಲ್ಲುವ ಈ ಮೂರು ಸೇರಿ ಕರ್ನಾಟಕ 23ನೇ ರಾಜ್ಯವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾದ್ಯಕ್ಷ ಅಮಿತ್ ಶಾ ಈಗಾಗಲೇ ರಾಜ್ಯದ ಕಡೆ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಮಾಜಿ ಶಾಸಕರಾದ ಬಸನಗೌಡ ಬಲ್ಲಟಗಿ, ಗಂಗಾಧರ ನಾಯಕ, ಡಾ| ಶರಣಪ್ಪ ಬಲ್ಲಟಗಿ, ಮಾನಪ್ಪ ನಾಯಕ, ಕೊಟ್ರೇಶಪ್ಪ ಕೋರಿ ಮಾತನಾಡಿದರು.
ಬಿಜೆಪಿ ಮುಖಂಡರಾದ ಉಮೇಶ ಸಜ್ಜನ, ಶಿವಶರಣಗೌಡ ಸಿರವಾರ, ಅಮರೇಗೌಡ ಉಮಳಿಹೊಸೂರು, ಅಯ್ಯಪ್ಪ ಮ್ಯಾಕಲ್, ನಾಗನಗೌಡ ಅತ್ತನೂರು, ಶ್ರೀನಿವಾಸ, ಚಂದ್ರು ಜಾನೇಕಲ್, ವಿರುಪಾಕ್ಷಿ ಹೂಗಾರ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ಸೇರಿದಂತೆ ಅನೇಕರಿದ್ದರು.